ಜಮ್ಮು ಕಾಶ್ಮೀರದಲ್ಲಿ ಮೇಘಸ್ಫೋಟ – 5 ಮಂದಿ ಸಾವು, 40 ಮಂದಿ ನಾಪತ್ತೆ
ಜಮ್ಮು ಕಾಶ್ಮೀರ : ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ದುರ್ಗಮ ಪ್ರದೇಶದಲ್ಲಿರುವ ಹಳ್ಳಿಯಲ್ಲಿ ಮೇಘಸ್ಫೋಟ ಉಂಟಾಗಿದ್ದು , ಸುಮಾರು 8 ಮನೆಗಳು ಕೊಚ್ಚಿಕೊಂಡು ಹೋಗಿವೆ. ಇಂದು ( 28/07/21) ಮುಂಜಾನೆ ಡಚ್ಚನ್ ತಹಸಿಲ್ ಪ್ರದೇಶದಲ್ಲಿರುವ ಹೊಂಝಾರ್ ಎಂಬ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಈ ಹಳ್ಳಿಗೆ ರಸ್ತೆ ಸಂಪರ್ಕವೂ ಇಲ್ಲ. ಘಟನೆ ಬಗ್ಗೆ ಇಂಡಿಯಾ ಟುಡೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕಿಶ್ತ್ವಾರ್ ಜಿಲ್ಲೆಯ ಜಿಲ್ಲಾಧಿಕಾರಿ, ಗ್ರಾಮದಲ್ಲಿ ರಸ್ತೆ ಸಂಪರ್ಕವಿಲ್ಲ. ಇದೀಗ ಸೇನಾ ಸಿಬ್ಬಂದಿ ಮತ್ತು ಪೊಲೀಸ್ ತಂಡ ಅಲ್ಲಿನ ಜನರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆಯೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ಸಿಬ್ಬಂದಿಗಳು ಗ್ರಾಮಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ವೇಳೆ 5 ಮೃತದೇಹಳು ಪತ್ತೆಯಾಗಿದ್ದು, ಇನ್ನೂ 40ಕ್ಕೂ ಹೆಚ್ಚು ಗ್ರಾಮಸ್ಥರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಾಪತ್ತೆಯಾಗಿರುವವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಸಮುತ್ತಮುತ್ತಲಿನ ಗ್ರಾಮಗಳಲ್ಲಿ ಮತ್ತು ಇಳಿಜಾರು ಪ್ರದೇಶಗಳಲ್ಲಿ ಎನ್ ಡಿಆರ್ ಎಫ್ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
60 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಲಂಬಾರ್ಡ್ ಪ್ರದೇಶದಲ್ಲೂ ಮಂಗಳವಾರ ರಾತ್ರಿ ಮೇಘ ಸ್ಫೋಟ ಸಂಭವಿಸಿದೆ. ಆದರೆ, ಹಾನಿ ಬಗ್ಗೆ ವರದಿಯಾಗಿಲ್ಲ. ಜಮ್ಮುನ ಬಹುತೇಕ ಭಾಗಗಳಲ್ಲಿ ಕೆಲವು ದಿನಗಳಿಂದ ಸತತ ಮಳೆಯಾಗುತ್ತಿದೆ. ಈ ವಾರದ ಅಂತ್ಯದವರೆಗೂ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ, ನದಿ ತೀರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕಳೆದೊಂದು ವಾರದಿಂದ ಜಮ್ಮುವಿನ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂದಿನ ಒಂದು ವಾರದ ಕಾಲ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪ್ರಮುಖವಾಗಿ ನದಿ ಪಾತ್ರದ ಗ್ರಾಮಗಳು ಮತ್ತು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಅಪಾಯದಲ್ಲಿದ್ದು ಅವರನ್ನು ತುರ್ತಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿ ಮತ್ತು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಕಣಿವೆ ರಾಜ್ಯಕ್ಕೆ ಅಗತ್ಯವಾದ ಎಲ್ಲ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. ಅಲ್ಲದೆ ಅಗತ್ಯಬಿದ್ದರೆ ಸೇನಾ ಹೆಲಿಕಾಪ್ಟರ್ ಗಳನ್ನೂ ಕೂಡ ಕಾರ್ಯಾಚರಣೆಗೆ ಇಳಿಸಲಾಗುತ್ತದೆ. ಈ ಕುರಿತಂತೆ ಡಿಎಂ ಅಶೋಕ್ ಶರ್ಮಾ ಅವರೊಂದಿಗೆ ತಾವು ಮಾತನಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಬಸ್ ಗೆ ಡಿಕ್ಕಿ ಹೊಡೆದ ಟ್ರಕ್ : ಭೀಕರ ಅಪಘಾತದಲ್ಲಿ 18 ಮಂದಿ ಸಾವು