ನಮ್ಮ ದೇಶಕ್ಕೆ ಪ್ರವೇಶವಿಲ್ಲ ಎಂದು ಚೀನಾಕ್ಕೆ ಸಂದೇಶ ರವಾನಿಸಲು ಜಪಾನ್ ಸಿದ್ಧತೆ
ಟೋಕಿಯೋ, ಜುಲೈ 5: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಜಪಾನ್ ಭೇಟಿ ಈ ಮೊದಲು ಏಪ್ರಿಲ್ ನಲ್ಲಿ ನಿಗದಿಯಾಗಿದ್ದರೂ ಬಳಿಕ ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟಿತು. ಆದರೆ ಇದೀಗ ಚೀನಾಕ್ಕೆ ಬುದ್ಧಿ ಕಲಿಸಲು ಹೊರಟಿರುವ ಪ್ರಧಾನ ಮಂತ್ರಿ ಶಿಂಜೊ ಅಬೆ ಅವರ ನೇತೃತ್ವದ ಜಪಾನ್ ಸರ್ಕಾರ 2008ರ ಬಳಿಕ ಇದೇ ಮೊದಲ ಬಾರಿಗೆ ಜಪಾನ್ ಭೇಟಿ ನೀಡಲು ನಿರ್ಧರಿಸಿರುವ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೆ ಪ್ರವಾಸ ರದ್ದು ಮಾಡಿ, ನಮ್ಮ ದೇಶಕ್ಕೆ ಕಾಲಿಡಬೇಡಿ ಎಂಬ ಸಂದೇಶ ರವಾನಿಸಲು
ತಯಾರಿ ನಡೆಸಿದೆ.
ಕೆಲವು ಸಮಯದಿಂದ ಚೀನಾ ಮತ್ತು ಜಪಾನ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಕ್ಸಿ ಭೇಟಿಯನ್ನು ಮರುಪರಿಶೀಲಿಸುವಂತೆ ಎಲ್ಡಿಪಿ( ಲಿಬರಲ್ ಡೆಮಾಕ್ರಾಟಿಕ್ ಪಕ್ಷ) ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಚೀನಾವು ಹಾಂಗ್ ಕಾಂಗ್ ಮೇಲೆ ರಾಷ್ಟ್ರೀಯ ಭದ್ರತಾ ಕಾನೂನನ್ನು ಹೇರಿರುವುದಕ್ಕೆ ಜಪಾನಿನ ಶಾಸಕರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇತ್ತೀಚಿನ ದಿನಗಳಲ್ಲಿ ಜಪಾನ್‌ನ ಜಲಗಡಿಯಲ್ಲಿ ಚೀನ ಹಡಗು ಅತಿಕ್ರಮಣ, ಭಾರತದ ಜೊತೆ ಗಡಿ ಸಂಘರ್ಷ, ಹಾಂಗ್ ಕಾಂಗ್ ಮೇಲೆ ಚೀನಾ ಹಿಡಿತ ಇತ್ಯಾದಿ ವಿಷಯಕ್ಕೆ ಸಂಬಂಧಿಸಿ ಜಪಾನ್ ಪ್ರಧಾನಿ ಶಿಂಜೋ ಅಭೆ ಅವರ ಲಿಬರಲ್ ಡೆಮಾಕ್ರಾಟಿಕ್ ಪಕ್ಷದೊಳಗೆಯೇ ಜಿನ್‌ಪಿಂಗ್ ಭೇಟಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ವಾರ ಜಾರಿಗೆ ಬಂದಿರುವ ಚೀನಾದ ಭದ್ರತಾ ಕಾನೂನು ಜಪಾನಿನ ಜನರು ಮತ್ತು ಹಾಂಗ್ ಕಾಂಗ್‌ನಲ್ಲಿನ ಕಂಪನಿಗಳ ಹಕ್ಕುಗಳನ್ನು ಹಾಳು ಮಾಡುತ್ತಿದೆ ಎಂದು ಜಪಾನ್ ಆತಂಕ ವ್ಯಕ್ತಪಡಿಸಿದ್ದು, ಜಾಗತಿಕ ಹಣಕಾಸು ಕೇಂದ್ರವಾದ ಹಾಂಗ್ ಕಾಂಗ್ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಲು ಕೊರೋನವೈರಸ್ ಸಾಂಕ್ರಾಮಿಕವನ್ನು ಚೀನಾ ಬಳಸಿಕೊಳ್ಳುತ್ತಿದೆ ಎಂದು ಜಪಾನ್ ಆರೋಪಿಸಿದೆ. ವಿಶ್ವದ ಅತಿದೊಡ್ಡ ಆಮದುದಾರ ಹಾಂಕಾಂಗ್‌ನಲ್ಲಿ ಜಪಾನಿನ ಕೃಷಿ ಸರಕುಗಳ ಸುಮಾರು 1,400 ಜಪಾನೀಸ್ ಕಂಪನಿಗಳು ಅಸ್ತಿತ್ವದಲ್ಲಿವೆ. ಚೀನಾದ ರಾಷ್ಟ್ರೀಯ ಭದ್ರತಾ ಶಾಸನವು ಹಾಂಗ್ ಕಾಂಗ್‌ನ ಅಡಿಪಾಯವನ್ನು ಅಲುಗಾಡಿಸುತ್ತದೆ ಎಂದು ಜಪಾನಿನ ವ್ಯಾಪಾರ ಸಮುದಾಯ ಕಳವಳ ವ್ಯಕ್ತಪಡಿಸಿದೆ. ಈ ಎಲ್ಲಾ ಕಾರಣಗಳಿಂದ ಜಪಾನ್ ಗೆ ಭೇಟಿ ನೀಡಲು ನಿರ್ಧರಿಸಿರುವ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ನಮ್ಮ ದೇಶಕ್ಕೆ ಪ್ರವೇಶವಿಲ್ಲ ಎಂಬ ಸಂದೇಶ ರವಾನಿಸಲು ಜಪಾನ್ ಮುಂದಾಗಿದೆ.