ಸರ್ಕಾರವು ಶಾಸಕರ ಒತ್ತಾಯಕ್ಕೆ ಮಣಿದು ಕಾಮಗಾರಿಗಳಿಗೆ ಹಣ ಬಿಡಗಡೆ ಮಾಡಲು ಮುಂದಾಗಿದೆ. ಹೀಗಾಗಿ ಹೇರಿದ್ದ ನಿರ್ಬಂಧವನ್ನು ಸರ್ಕಾರ ಹಿಂಪಡೆದಿದೆ.
ನಿಕಟಪೂರ್ವ ಸರ್ಕಾರದ ಕಾಮಗಾರಿಗಳ ಬಾಕಿ ಪಾವತಿಗೆ ಕೆಲಕಾಲ ತಾತ್ಕಾಲಿಕ ತಡೆ ಹಾಕುವುದು ಹಿಂದಿನಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯವಾಗಿದೆ. ಆದರೆ, ಸದ್ಯ ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕಾಗಿ ಎರಡು ತಿಂಗಳವರೆಗೂ ತಡೆ ಹಾಕಲಾಗಿತ್ತು. ಹೀಗಾಗಿ ಸ್ವಪಕ್ಷದ ಶಾಸಕರು, ಗುತ್ತಿಗೆದಾರರು ಅಸಮಾಧಾನಗೊಂಡಿದ್ದರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಕೂಡ ವಿರೋಧ ಕೇಳಿ ಬಂದಿತ್ತು.
ಈಗ ಸರ್ಕಾರವು ತಾನು ಹೇರಿದ್ದ ನಿರ್ಬಂಧ ಸಡಿಲಿಸಿ ಆದೇಶ ಹೊರಡಿಸಿದೆ. ಎಲ್ಲ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರಗಳ ಮುಂದುವರಿದ ಕಾಮಗಾರಿಗಳ ಸಮರ್ಪಕ ಅನುಷ್ಠಾನದ ಬಗ್ಗೆ ಪರಿಶೀಲಿಸಿ, ನಿಯಮಾನುಸಾರವಿರುವುದನ್ನು ಖಚಿತಪಡಿಸಿಕೊಂಡು ಹಿಂದಿನಂತೆಯೇ ಹಣ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಆರ್ಥಿಕ ಇಲಾಖೆಯಿಂದ ನೀಡಲಾದ ಅಯವ್ಯಯ ಸಲಹಾ ಟಿಪ್ಪಣಿ ಹಾಗೂ ಅಧಿಕಾರ ಪ್ರತ್ಯಾಯೋಜನೆ ಆದೇಶದ ಪ್ರಕಾರ ಹೊಸ ಯೋಜನೆ, ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮವಹಿಸುವಂತೆ ಇಲಾಖೆಗಳಿಗೆ ಸೂಚಿಸಲಾಗಿದೆ.