ಅಮರ್ ಆಳ್ವಾ, ಒಂದು ಕಾಲದಲ್ಲಿ ಅಂಡರ್ ವರ್ಲ್ಡ್ ಡಾನ್ ಆಗಿ ಮೆರೆದವರು. ಜಯರಾಜ್, ಮುತ್ತಪ್ಪ ರೈ, ಆಯಿಲ್ ಕುಮಾರ್ ರೀತಿಯಲ್ಲೇ ಭೂಗತಲೋಕದಲ್ಲಿ ಮೆರೆದವರು. ಮಂಗಳೂರು ಭಾಗದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದವರು. ಇದೀಗ ಇವರ ಜೀವನಾಧಾರಿತ ಘಟನೆಗಳನ್ನು ಬೆಳ್ಳಿ ಪರದೆ ಮೇಲೆ ತರಲು ತಯಾರಿ ನಡೆದಿದೆ.
ಇತ್ತೀಚೆಗಷ್ಟೇ ಅಮರ್ ಆಳ್ವ ಕುರಿತ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಇದೇ ಡಾನ್ ಕಥೆಯಿಟ್ಟುಕೊಂಡು ಮತ್ತೊಂದು ಸಿನಿಮಾ ತಯಾರಾಗ್ತಿದೆ.
ಅಂದಹಾಗೆ ಡಾನ್ ಅಮರ್ ಆಳ್ವ 28 ವರ್ಷಗಳ ಹಿಂದೆ ಮಂಗಳೂರು ಭೂಗತ ಜಗತ್ತನ್ನು ಆಳಿದವರು ಮಂಗಳೂರಿನಲ್ಲಿ ನೆಲೆಸಿದ್ದ ಅಮರ್ ಆಳ್ವ ಮುಂಬೈ ಭೂಗತ ಜಗತ್ತಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಂಗಳೂರು ಭೂಗತ ಲೋಕದಲ್ಲಿ ಅಮರ್ ಆಳ್ವಾ ಡೇರಿಂಗ್ ಪರ್ಸನಾಲಿಟಿಯಾಗಿ ಗುರುತಿಸಿಕೊಂಡಿದ್ದರು. 1992ರಲ್ಲಿ ಅವರನ್ನು ಹತ್ಯೆ ಮಾಡಲಾಯಿತು. ಇದೇ ಕಥೆಯಲ್ಲೀಗ ಮತ್ತೊಂದು ಸಿನಿಮಾ ನಿರ್ಮಾಣ ಆಗ್ತಿರೋದು ಸುದ್ದಿಯಾಗಿದೆ.
ಡಾನ್ ಜಯರಾಜ್ ಪುತ್ರ ಅಜಿತ್ ನಟನೆ
ಅಮರ್ ಆಳ್ವ ಕುರಿತ ಕಥೆಯನ್ನು ಬೆಳ್ಳಿಪರದೆ ಮೇಲೆ ಯುವ ನಿರ್ದೇಶಕ ಲೋಕೇಶ್ ಶೆಟ್ಟಿ ಮುಂದಾಗಿದ್ದಾರೆ. ಈ ಸಿನಿಮಾದಲ್ಲಿ ಬೆಂಗಳೂರಿನ ಡಾನ್ ಜಯರಾಜ್ ಪುತ್ರ ಅಜಿತ್ ಜಯರಾಜ್ ನಟಿಸುತ್ತಿದ್ದಾರೆ. ಅಲ್ಲದೆ ಸಿನಿಮಾಗೆ ‘1992..ಒನ್ಸ್ ಅಪ್ ಆನ್ ಎ ಟೈಮ್ ಇನ್ ಮಂಗಳೂರು’ ಎಂದು ಟೈಟಲ್ ಇಟ್ಟು, ಎರಡು ವರ್ಷಗಳ ಹಿಂದೆಯೇ ಫಿಲ್ಮ್ ಚೇಂಬರ್ ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ. ಇದೀಗ ಇದೇ ಕಥೆಯಲ್ಲಿ ರಿಷಬ್ ನಟಿಸೋಕೆ ಸಿದ್ಧತೆ ನಡೆಸುತ್ತಿದ್ದು, ಒಂದಷ್ಟು ಗೊಂದಲಗಳು ಉಂಟಾಗಿವೆ.
ಇನ್ನು ರಿಷಬ್ ಶೆಟ್ಟಿ ಸಿನಿಮಾ ಬಗ್ಗೆ ಮಾತನಾಡಿದ ಅಜಿತ್, ಅಮರ್ ಆಳ್ವ ಜೀವನಾಧಾರಿತ ಕಥೆಯನ್ನು ಎರಡು ವರ್ಷಗಳ ಹಿಂದೆಯೇ ಅನೌನ್ಸ್ ಮಾಡಿ, ಟೈಟಲ್ ರಿಜಿಸ್ಟರ್ ಮಾಡಿಸಿದ್ದೀವಿ. ಈಗ ರಿಷಬ್ ಅವರೂ ಅಮರ್ ಆಳ್ವ ಕಥೆಗೆ ಪ್ಲಾನ್ ಮಾಡಿದ್ದಾರೆ. ಇಷ್ಟರಲ್ಲೇ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.