ಚನ್ನಪಟ್ಟಣ:ಉಪಚುನಾವಣೆ ಬಳಿಕ ಮೊದಲ ಬಾರಿಗೆ ಜೆಡಿಎಸ್ ಪಕ್ಷದ ಶಾಸಕರು, ಮುಖಂಡರ ಸಭೆ ನಡೆಸಲು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ನಿರ್ಧರಿಸಿದ್ದು, ಇಂದು ಚನ್ನಪಟ್ಟಣದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಶಾಸಕರ ಕುಂದು ಕೊರತೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡುವ ಕುರಿತು ಚರ್ಚೆ ಆಗಲಿದೆ.
ಜಿ.ಟಿ. ದೇವೇಗೌಡ ಗೈರು: ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಮತ್ತು ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಅವರು ಸಭೆಗೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ. ಕ್ಷೇತ್ರದಲ್ಲಿ ಕೆಲವು ಪ್ರಮುಖ ಕಾರ್ಯಕ್ರಮಗಳು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಸಮಾಧಾನವಿಲ್ಲ:ಜೆಡಿಎಸ್ ನಾಯಕರ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಜಿ.ಟಿ. ದೇವೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. “ನಾನು ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಓಡಾಡುತ್ತಿದ್ದೇನೆ. ಆದ್ದರಿಂದ ಪಕ್ಷದ ಸಂಘಟನೆ ಹಾಗೂ ಸಭೆಗೆ ಹಾಜರಾಗಲು ಆಗುತ್ತಿಲ್ಲ. ಇದನ್ನು ಹೊರತುಪಡಿಸಿದರೆ ನನಗೆ ಯಾವುದೇ ಬೇಸರವೂ ಇಲ್ಲ” ಎಂದು ಅವರು ಹೇಳಿದ್ದಾರೆ.
ಪಕ್ಷದ ನೂತನ ಅಧ್ಯಕ್ಷರ ಆಯ್ಕೆ:ಜೆಡಿಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ. ಹಾಲಿ ಜೆಡಿಎಸ್ ರಾಜ್ಯಾಧ್ಯಕ್ಷರು ಎಚ್.ಡಿ. ಕುಮಾರಸ್ವಾಮಿ, ಅವರು ಮಂಡ್ಯದ ಸಂಸದರು ಮತ್ತು ಕೇಂದ್ರದಲ್ಲಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಿಲ್ಲ. ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಪಕ್ಷಕ್ಕೆ ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ಪಕ್ಷ ಮುಂದಾಗಿದೆ.