ಚಿಕ್ಕಬಳ್ಳಾಪುರ : ಸುಗ್ರಿವಾಜ್ಞೆ ಮೂಲಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ, ಕೈಗಾರಿಕೆ, ಎಪಿಎಂಸಿ ಸೇರಿ ಹಲವು ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಜೆಡಿಎಸ್ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಡಳಿತ ಭವನದ ಬಳಿ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ‘ರಾಜ್ಯ ಸರ್ಕಾರ ಜನಸಾಮಾನ್ಯರ ಹಿತ ಕಡೆಗಣಿಸಿ ರೈತರು, ಕಾರ್ಮಿಕರ ಹಿತ ಗಾಳಿಗೆ ತೂರಿ, ಕಾಯ್ದೆಗಳ ತಿದ್ದುಪಡಿ ಮೂಲಕ ಬಂಡವಾಳ ಶಾಹಿಗಳಿಗೆ ಅನುವು ಮಾಡಿಕೊಡಲು ಹೊರಟಿದೆ. ಕೂಡಲೇ ತಿದ್ದುಪಡಿಗಳನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.
ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ‘ಇಡೀ ಜನಜೀವನದ ಮೇಲೆ ಪರಿಣಾಮ ಬೀರುವಂತಹ ತಿದ್ದುಪಡಿಗಳನ್ನು ಶಾಸನಸಭೆ, ಸಂಸತ್ತಿನಲ್ಲಿ ಚರ್ಚಿಸದೆ ಸುಗ್ರಿವಾಜ್ಞೆ ಮೂಲಕ ಕಾಯ್ದೆ ಜಾರಿಗೆ ಮುಂದಾಗುತ್ತಿರುವುದು ಜನರನ್ನು ವಂಚಿಸುವ ಕೆಲಸವಾಗಿದೆ. ಬಡ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಿ ದಿವಾಳಿ ಮಾಡುವುದು ಇದರ ಹಿಂದಿನ ಸಂಚು’ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ.ರಾಜಾಕಾಂತ್, ಬಂಕ್ ಮುನಿಯಪ್ಪ, ತನುಜಾ ರಘು, ಮುಖಂಡರಾದ ಮೇಲೂರು ರವಿಕುಮಾರ್, ನರಸಿಂಹಮೂರ್ತಿ, ಮಂಜುನಾಥ್ ರೆಡ್ಡಿ, ಸಿ.ಡಿ.ಗಂಗುಲಪ್ಪ, ನರಸಿಂಹ ನಾಯ್ಡು, ಅಂಗರೇಕನಹಳ್ಳಿ ರವಿಕುಮಾರ್, ಆರ್.ಮಟಮಪ್ಪ ಭಾಗವಹಿಸಿದ್ದರು.








