ಮಂಡ್ಯ: ಬಂಡಾಯ ಶಾಸಕ ಮುನಿರತ್ನ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ ನಿಖಿಲ್ ಕುಮಾರಸ್ವಾಮಿ ಫೇಸ್‍ಬುಕ್ ಪೋಸ್ಟ್ ಗೆ ಜೆಡಿಎಸ್ ಕಾರ್ಯಕರ್ತರಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಫೇಸ್‍ಬುಕ್‍ನಲ್ಲಿ ಶುಭಾಶಯದ ಪೋಸ್ಟ್ ಹಾಕಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದಾರೆ.
ಮುಖ್ಯಮಂತ್ರಿಯಾಗಿದ್ದ ಕುಮಾರಣ್ಣನ ಕತ್ತು ಹಿಸುಕಿದ ಮುನಿರತ್ನ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಿಖಿಲ್‍ಗೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ದಯವಿಟ್ಟು ರಾಜೀನಾಮೆ ಕೊಡಿ, ಯುವ ರಾಜ್ಯಾಧ್ಯಕ್ಷ ಸ್ಥಾನವನ್ನ ಶರಣಗೌಡರಿಗೆ ಕೊಡಿ, ರಾಜ್ಯಾದ್ಯಂತ ಓಡಾಟ ಮಾಡಿ ಪಕ್ಷ ಸಂಘಟನೆ ಮಾಡಿ ಎಂದು ತಾಕೀತು ಮಾಡಿದ್ದಾರೆ.
ಎರಡು ದೋಣಿ ಪ್ರಯಾಣ ಮುಳುಗಿಸುತ್ತೆ, ಕಾರ್ಯಕರ್ತರು ಬೇರೆ ಪಕ್ಷದ ಬಗ್ಗೆಯೂ ಪ್ರೀತಿ ತೋರಿದರೆ ನಿಮ್ಮ ಪ್ರಗತಿ ಹೇಗೆ? ನೀವು ಅಧ್ಯಕ್ಷರಾದ ಮೇಲೆ ಎಷ್ಟು ಕಡೆ ಪ್ರಯಾಣ ಮಾಡಿದ್ದೀರಿ? ದೇವೇಗೌಡ, ಕುಮಾರಸ್ವಾಮಿ ಲೆವೆಲ್‍ನಲ್ಲಿ ಯೋಚನೆ ಬಿಡಿ. ನಿಮ್ಮ ಸಮರ್ಥನೆ ಏನೇ ಇದ್ದರೂ ಆತ ನಮ್ಮ ಬದ್ಧ ವೈರಿ, ಮೈತ್ರಿ ಸರ್ಕಾರಕ್ಕೆ ಬಗೆದ ದ್ರೋಹ ಸಹಿಸಲು ಸಾಧ್ಯವಿಲ್ಲ. ಅಣ್ಣ ಪಕ್ಷ ಸಂಘಟನೆ ಮಾಡಿ, ಇಲ್ಲ ರಾಜೀನಾಮೆ ಕೊಟ್ಟು ಸಿನಿಮಾ ಮಾಡಿ ಎಂದೆಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.








