ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ಬೆಂಗಳೂರು ಜಾತ್ರೆ ಈಗ ದೊಡ್ಡ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಈ ಜಾತ್ರೆಯ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ, ಜೆಡಿಎಸ್ ಪಕ್ಷವು ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದೆ. ನಗರದ ಮೂಲಸೌಕರ್ಯಗಳು ಹಳ್ಳ ಹಿಡಿದಿರುವಾಗ ಕೋಟ್ಯಂತರ ರೂಪಾಯಿ ಸುರಿದು ಮೋಜು ಮಸ್ತಿ ಮಾಡುವುದು ಎಷ್ಟು ಸರಿ ಎಂದು ಜೆಡಿಎಸ್ ಪ್ರಶ್ನಿಸಿದೆ.
ಬೆಂಗಳೂರಿನ ಇಂದಿನ ದುಸ್ಥಿತಿಯನ್ನು ಎತ್ತಿ ತೋರಿಸಿರುವ ಜೆಡಿಎಸ್, ನಗರದ ರಸ್ತೆ ಗುಂಡಿಗಳಲ್ಲಿ ಪ್ರಯಾಣ ಮಾಡುವುದು ಸಾಹಸದ ಕೆಲಸವಾಗಿದೆ ಎಂದು ಲೇವಡಿ ಮಾಡಿದೆ. ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ ವಾಹನಗಳ ಹಾರ್ನ್ ಸದ್ದೇ ಜನರಿಗೆ ಸಂಗೀತದ ರಸದೌತಣ ನೀಡುತ್ತಿರುವಾಗ, ಸರ್ಕಾರ ಮತ್ತೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ಯಾವ ಸಂಗೀತ ಹಬ್ಬ ಮಾಡಲು ಹೊರಟಿದೆ ಎಂದು ವ್ಯಂಗ್ಯವಾಡಿದೆ. ರಸ್ತೆ, ನೀರು ಮತ್ತು ವಿದ್ಯುತ್ ಒದಗಿಸಲು ಪರದಾಡುತ್ತಿರುವ ಸರ್ಕಾರಕ್ಕೆ ಇಂತಹ ಅದ್ದೂರಿ ಕಾರ್ಯಕ್ರಮಗಳ ಅಗತ್ಯವೇನಿದೆ ಎಂದು ಕಿಡಿಕಾರಿದೆ.
ಸಂಸ್ಥೆಗಳ ಹಣ ಲೂಟಿ ಮಾಡಿ ಮೋಜು ಮಸ್ತಿಗೆ ಬಳಕೆ
ಈ ಜಾತ್ರೆಗಾಗಿ ಹಣ ಹೊಂದಿಸಲು ಸರ್ಕಾರ ಅನುಸರಿಸುತ್ತಿರುವ ಹಾದಿಯನ್ನು ಜೆಡಿಎಸ್ ತೀವ್ರವಾಗಿ ಖಂಡಿಸಿದೆ. ಬಿಡಿಎ, ಬೆಸ್ಕಾಂ, ಜಲಮಂಡಳಿ ಮತ್ತು ಮೆಟ್ರೋದಂತಹ ಸಾರ್ವಜನಿಕ ಸೇವಾ ಸಂಸ್ಥೆಗಳ ಅಭಿವೃದ್ಧಿ ನಿಧಿಯನ್ನು ಕಿತ್ತುಕೊಂಡು ಜಾತ್ರೆಗೆ ಸುರಿಯಲಾಗುತ್ತಿದೆ. ಜನರ ತೆರಿಗೆ ಹಣವನ್ನು ಮೂಲಸೌಕರ್ಯಕ್ಕೆ ಬಳಸುವ ಬದಲು ಕೇವಲ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಸರ್ಕಾರಕ್ಕೆ ಜನರ ಕಷ್ಟಗಳಿಗಿಂತ ಅದ್ದೂರಿ ಪ್ರದರ್ಶನಗಳೇ ಮುಖ್ಯವಾಗಿವೆ ಎಂದು ಜೆಡಿಎಸ್ ಆರೋಪಿಸಿದೆ.
ರೈತರು ಸಾಯುತ್ತಿದ್ದರೆ ಸರ್ಕಾರಕ್ಕೆ ಪಿಟೀಲು ಬಾರಿಸುವ ಚಟವೇ
ಇಟಲಿಯ ರೋಮ್ ನಗರ ಹೊತ್ತಿ ಉರಿಯುವಾಗ ಅಲ್ಲಿನ ದೊರೆ ನೀರೋ ಅರಮನೆಯಲ್ಲಿ ಕುಳಿತು ಪಿಟೀಲು ಬಾರಿಸುತ್ತಿದ್ದನಂತೆ, ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿಯೂ ಹಾಗೆಯೇ ಆಗಿದೆ ಎಂದು ಜೆಡಿಎಸ್ ಟೀಕಿಸಿದೆ. ರಾಜ್ಯದಲ್ಲಿ ಮಳೆ ಬೆಳೆ ಇಲ್ಲದೆ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅನ್ನದಾತನ ಹೊಟ್ಟೆ ತಣ್ಣಗಿದ್ದರೆ ಮಾತ್ರ ನಾಡಿನಲ್ಲಿ ಕಲೆ, ಸಾಹಿತ್ಯ ಮತ್ತು ಹಬ್ಬಗಳಿಗೆ ಶೋಭೆ ಬರುತ್ತದೆ. ಜನರ ಕಣ್ಣೀರು ಒರೆಸುವ ಬದಲು 200 ಕೋಟಿ ರೂಪಾಯಿಗಳನ್ನು ಜಾತ್ರೆಗೆ ಸುರಿಯುವುದು ಅಕ್ಷಮ್ಯ ಅಪರಾಧ ಎಂದು ಗುಡುಗಿದೆ.
ಜಾತ್ರೆಯ ಹಣವನ್ನು ರೈತರಿಗೆ ನೀಡಿ ಎಂದು ಜೆಡಿಎಸ್ ಆಗ್ರಹ
ಈ ತಕ್ಷಣವೇ ಬೆಂಗಳೂರು ಜಾತ್ರೆಯಂತಹ ಅನಗತ್ಯ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ. ಆಡಂಬರದ ಪ್ರದರ್ಶನಗಳಿಗೆ ಮೀಸಲಿಟ್ಟಿರುವ ಸಂಪೂರ್ಣ ಮೊತ್ತವನ್ನು ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಪರಿಹಾರವಾಗಿ ವಿತರಿಸಬೇಕು. ರೈತರು ಬದುಕಿದರೆ ಮಾತ್ರ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ. ಮೋಜು ಮಸ್ತಿನ ಸಂಸ್ಕೃತಿಯನ್ನು ಬಿಟ್ಟು ಜನಪರ ಆಡಳಿತ ನೀಡಲು ಸರ್ಕಾರ ಮುಂದಾಗಬೇಕು ಎಂದು ಜೆಡಿಎಸ್ ಹರಿಹಾಯ್ದಿದೆ.







