JDS – ʼಸುಳ್ ಬಿಜೆಪಿʼಗೆ ಸತ್ಯವೆಂದರೆ ಅಪಥ್ಯ
ಬೆಂಗಳೂರು : ʼಸುಳ್ ಬಿಜೆಪಿʼಗೆ ಸತ್ಯವೆಂದರೆ ಅಪಥ್ಯ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ʼಸುಳ್ ಸಿಎಂʼ ಎಂದೇ ಪ್ರಖ್ಯಾತಿ ಆಗುತ್ತಿದ್ದಾರೆ ಎಂದು ಜೆಡಿಎಸ್ ಕಿಡಿಕಾರಿದೆ.
ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೆಚ್ ಡಿ ದೇವೇಗೌಡ ಅವರಿಗೆ ಆಹ್ವಾನ ನೀಡದಿರುವ ಬಗ್ಗೆ ಜೆಡಿಎಸ್ ಪಕ್ಷ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್ ಯುದ್ಧ ಮುಂದುವರಿಸಿದೆ.
ಜೆಡಿಎಸ್ ತನ್ನ ಟ್ವಿಟ್ಟರ್ ನಲ್ಲಿ, ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಸ್ತಿತ್ವದ ಭಯ ಎನ್ನುವುದು ಹಾಗಿರಲಿ, ಪ್ರಧಾನಿಯ ನಾಮಬಲ ಒಂದಿಲ್ಲದಿದ್ದರೆ ನಿಮಗೆ ಠೇವಣಿಗೂ ಖಾತರಿ ಇಲ್ಲ. ಇನ್ನು 6 ತಿಂಗಳಲ್ಲಿ ಮೋದಿ ಅವರು ಎಷ್ಟು ಸಲ ಕರ್ನಾಟಕಕ್ಕೆ ಓಡೋಡಿ ಬರುತ್ತಾರೋ ನೋಡೋಣ. ಅಲ್ಲಿ ನಿಮ್ಮ ಯೋಗ್ಯತೆಯ ಅಳತೆ ಎಷ್ಟು? ಎಂಬುದು ಗೊತ್ತಾಗುತ್ತದೆ.
ಬಿಜೆಪಿಯ ಒಕ್ಕಲಿಗ ನಾಯಕರು ಮುನ್ನೆಲೆಗೆ ಬರುವುದನ್ನು ಕುಮಾರಸ್ವಾಮಿ ಅವರು ಸಹಿಸುತ್ತಿಲ್ಲ ಎನ್ನುತ್ತಿದೆ ಬಿಜೆಪಿ!! ʼಭೂತದ ಬಾಯಲ್ಲಿ ಭಗದ್ಗೀತೆʼ ಎಂದರೆ ಇದೇ. ಧರ್ಮ, ಜಾತಿ, ಆಚಾರ, ವಿಚಾರ, ಆಹಾರದ ವಿಷಯದಲ್ಲೇ ವಿಷ-ವಿಕೃತಿಗಳನ್ನು ಬಿತ್ತಿದ ಬಿಜೆಪಿ, ಈಗ ಸಹಿಷ್ಣುತೆಯ ಬಗ್ಗೆ ಪಾಠ ಬಿಗಿಯುತ್ತಿದೆ!!
20 ದಿನಗಳ ಹಿಂದೆ ಸಚಿವ ಡಾ. ಅಶ್ವಥ್ ನಾರಾಯಣ್ ಅವರು ಮಾಜಿ ಪ್ರಧಾನಿಗಳ ನಿವಾಸಕ್ಕೆ ಭೇಟಿ ನೀಡಿ ಮೃತ್ತಿಕೆ ಸಂಗ್ರಹದ ಬಗ್ಗೆ ತಿಳಿಸಿ ಆಹ್ವಾನಿಸಿದ್ದರಷ್ಟೇ. ಆದರೆ,ಮುಖ್ಯಮಂತ್ರಿಗಳು ಪ್ರತಿಮೆ ಅನಾವರಣಕ್ಕೆ ಆಹ್ವಾನಿಸಿದ್ದರು ಮತ್ತೂ ಆಹ್ವಾನ ಪತ್ರಿಕೆಯಲ್ಲೂ ಶ್ರೀ ದೇವೇಗೌಡರ ಹೆಸರನ್ನು ನಮೂದಿಸಲಾಗಿತ್ತೆಂದು ಹಸಿಸುಳ್ಳನ್ನೇ ಬಿಜೆಪಿ ಟ್ವೀಟಿಸಿದೆ.
ಬಿಜೆಪಿ ʼಗೊಬೆಲ್ ಸಂತತಿಯ ಶಿಶುʼ ಎನ್ನುವುದಕ್ಕೆ ಇದಕ್ಕಿಂತ ಸತ್ಯ ಸಾಕ್ಷ್ಯ ಬೇಕಾ? ʼಸುಳ್ ಬಿಜೆಪಿʼಗೆ ಸತ್ಯವೆಂದರೆ ಅಪಥ್ಯ. ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ʼಸುಳ್ ಸಿಎಂʼ ಎಂದೇ ಪ್ರಖ್ಯಾತಿ ಆಗುತ್ತಿದ್ದಾರೆ. ಇದಲ್ಲವೇ ವಿಪರ್ಯಾಸ ಎಂದು ಜೆಡಿಎಸ್ ಬರೆದುಕೊಂಡಿದೆ.