JDS – ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆದು ತಂದವರು ಯಾರು?
ಬೆಂಗಳೂರು : ಶ್ರೀ ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆದು ತಂದವರು ಯಾರು? ಸಂತ ಕನಕದಾಸರ ʼಕುಲ ಕುಲವೆಂದು ಹೊಡೆದಾಡದಿರಿ..ʼ ಪದವನ್ನು ಹೇಳುತ್ತಲೇ ʼಕುಲಕಿಚ್ಚಿನ ರಾಜಕೀಯʼ ಮಾಡಿದವರು ಯಾರು ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ಜೆಡಿಎಸ್ ಪ್ರಶ್ನಿಸಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಜೆಡಿಎಸ್, ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ, ಸ್ವತಃ ಫೋನ್ ಕರೆ ಮೂಲಕ ದೇವೇಗೌಡರನ್ನು ಆಹ್ವಾನಿಸಿದ್ದಾರೆ ಎಂದು ‘ಗೊಬೆಲ್ ಬಿಜೆಪಿ’ ಟ್ವೀಟಿಸಿ ಸುಳ್ಳು ಹೇಳಿದೆ. ಸತ್ಯ ಏನೆಂಬುದನ್ನು ನಾವೂ ಟ್ವೀಟಿನಲ್ಲೇ ರಾಜ್ಯದ ಜನತೆಗೆ ನಿವೇದಿಸಿದ್ದೇವೆ. ಅದನ್ನು ಓದಲು ʼಗೊಬೆಲ್ ಬಿಜೆಪಿʼಗೆ ಗರ ಬಡಿದಿದೆಯಾ?
ನಾಡಪ್ರಭುಗಳ ವಿಚಾರದಲ್ಲೂ ಜೆಡಿಎಸ್ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ. ಅರ್ಧದಿನದ ಅರೆಬರೆ ಭೇಟಿಯಲ್ಲಿ ಘನವೇತ್ತ ಪ್ರಧಾನಿಗಳು ಮಾಡಿದ್ದಾದರೂ ಏನು? ‘ಒಂದೇ ಕಲ್ಲಿನಲ್ಲಿ ನಾಲ್ಕು ಜಾತಿಗಳ ಮತಬುಟ್ಟಿಗೆ ಕೈ ಹಾಕಿದ ಪ್ರಧಾನಿ’ / ‘ಪ್ರತಿಮಾ ಪಥ, ಮೋದಿ ರಥ’ ಎನ್ನುವ ಸುದ್ದಿಗಳನ್ನು ಬಿಜೆಪಿ ನೋಡಲಿಲ್ಲವೆ?

ಕಮಲಕ್ಕೆ ಕಾಮಾಲೆ ಕಣ್ಣು ಎನ್ನುವುದು ನಾಟಕವೋ, ಬೂಟಕವೋ? ಜಾತಿವಾರು ಮತಗಳ ಧ್ರುವೀಕರಣಕ್ಕೆ ಹೊರಟವರು ಯಾರು? ಶ್ರೀ ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆದು ತಂದವರು ಯಾರು? ಸಂತ ಕನಕದಾಸರ ʼಕುಲ ಕುಲವೆಂದು ಹೊಡೆದಾಡದಿರಿ..ʼ ಪದವನ್ನು ಹೇಳುತ್ತಲೇ ʼಕುಲಕಿಚ್ಚಿನ ರಾಜಕೀಯʼ ಮಾಡಿದವರು ಯಾರು? ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?
ಕೊನೆಯದಾಗಿ; ಸಂಸ್ಕಾರವೇ ಗೊತ್ತಿಲ್ಲದ ಪಕ್ಷಕ್ಕೆ ಶಿಷ್ಟಾಚಾರ ಮಾತೇಕೆ? ಅದು ತನಗಿಲ್ಲ ಎಂದು ಬಿಜೆಪಿ ಸಾಬೀತುಪಡಿಸಿದೆ. ಕನ್ನಡದ ಆಚಾರ-ವಿಚಾರಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವ ಆ ಪಕ್ಷ, ಕನ್ನಡನಾಡಿಗೆ ಬಹುದೊಡ್ಡ ಬೆದರಿಕೆ ಎಂದು ಜೆಡಿಎಸ್ ಕುಟುಕಿದೆ.








