ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಇಂದು ಪ್ರಮಾಣ ವಚನ ಸ್ವೀಕಾರ… Nitish Kumar JD(U) sworn in as Bihar CM
ಇಂದು ಬಿಹಾರದ ಮುಖ್ಯಮಂತ್ರಿಯಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿಯಾಗಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಧ್ಯಾಹ್ನ ಪಾಟ್ನಾದ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಇದಕ್ಕೂ ಮುನ್ನ ನಿತೀಶ್ ಕುಮಾರ್ ಅವರು ನಿನ್ನೆ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ನಿತೀಶ್ ಕುಮಾರ್ ಅವರನ್ನು ಬೆಂಬಲಿಸುವ ಏಳು ಪಕ್ಷಗಳ 164 ಶಾಸಕರ ಪಟ್ಟಿಯನ್ನು ಸಲ್ಲಿಸಿದರು. ಇವುಗಳಲ್ಲಿ ಆರ್‌ಜೆಡಿ, ಕಾಂಗ್ರೆಸ್, ಹಿಂದೂಸ್ತಾನಿ ಅವಾಮ್ ಮೋರ್ಚಾ, ಎಡ ಪಕ್ಷಗಳು ಮತ್ತು ಒಬ್ಬ ಸ್ವತಂತ್ರ ಶಾಸಕ ಸೇರಿದ್ದಾರೆ.
ಈ ಪಕ್ಷಗಳ ಜಂಟಿ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಜೆಡಿಯು, ಆರ್ಜೆಡಿ ಮತ್ತು ಕಾಂಗ್ರೆಸ್ ಒಳಗೊಂಡಿರುವ ಮಹಾಮೈತ್ರಿಕೂಟದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಸಂಬಂಧವನ್ನು ಜೆಡಿಯು ಕಡಿದುಕೊಂಡ ನಂತರ ಈ ಸಭೆ ನಡೆದಿದೆ.
ಇದಕ್ಕೂ ಮುನ್ನ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಹೊಸ ಸರ್ಕಾರ ರಚಿಸಲು ನಿತೀಶ್ ಕುಮಾರ್ ಅವರಿಗೆ ತಮ್ಮ ಬೆಂಬಲದ ಪತ್ರವನ್ನು ಸಲ್ಲಿಸಿದ್ದವು. ನಿನ್ನೆ ಬೆಳಗ್ಗೆ ನಿತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜೆಡಿಯು ಶಾಸಕಾಂಗ ಪಕ್ಷದಲ್ಲಿ ಎನ್‌ಡಿಎ ತೊರೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ (HAM) ಕೂಡ ನಿತೀಶ್ ಕುಮಾರ್ ಅವರಿಗೆ ಬೇಷರತ್ತಾಗಿ ಬೆಂಬಲವನ್ನು ನೀಡಿದೆ.