ಉಡುಪಿ : ತಬ್ಲಿಘಿಗಳ ವಿರುದ್ಧ ಮಾತನಾಡಿದ್ದಕ್ಕೆ ಹಾಗೂ ಹಿಂದೂ ಯುವಕನ ಪರ ನಿಂತಿದ್ದಕ್ಕೆ ನನಗೆ ಬೆದರಿಕೆ ಕರೆ ಮಾಡಿ, ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ಹಿಂದೂ ಕಾರ್ಯಕರ್ತ ಕೂವೈತ್ ನಲ್ಲಿ ಮೋದಿ ಪರವಾಗಿ ಮಾತನಾಡಿದ್ದಾನೆ. ಇದರಿಂದ ಅಲ್ಲಿನ ಜಿಹಾದಿಗಳು ಆತನ ಮೇಲೆ ಹಲ್ಲೆ ಮಾಡಿದ್ದು, ಕಪಾಳ ಮೋಕ್ಷ ಮಾಡಿದ್ದಾರೆ. ಅಲ್ಲದೆ ಕ್ಷಮೆಯಾಚಿಸಿ, ಫೇಸ್ಬುಕ್ ನಿಂದ ಪೋಸ್ಟ್ ತಗೆಯುವಂತೆ ಬೆದರಿಕೆ ಹಾಕಿದ್ದಾರೆ. ಈ ಘಟನೆ ಖಂಡಿಸಿ ಟ್ವೀಟ್ ಮಾಡಿದ್ದೆ, ಮಾಧ್ಯಮದವರ ಜೊತೆ ಸಹ ಮಾತನಾಡಿದ್ದೆ. ಅಲ್ಲದೆ ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದೇನೆ. ಹೀಗಾಗಿ ನನಗೆ ಬೆದರಿಕೆ ಕರೆಗಳು ಮಾಡುತ್ತಿದ್ದಾರೆ. ಅಲ್ಲದೆ ತುಂಬಾ ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಬೆದರಿಕೆ ಕರೆ ಬರುತ್ತಿರುವುದು ಇದೇ ಮೊದಲಲ್ಲ ಹಿಂದೆ ಅಣ್ಣಾಮಲೈ ಎಸ್ ಪಿ ಆಗಿದ್ದಾಗಲೂ ಹೆಚ್ಚು ಬೆದರಿಕೆ ಕರೆ ಬರುತ್ತಿದ್ದವು. ಪಿಎಫ್ಐ(ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಬಗ್ಗೆ ಮಾತನಾಡಿದ್ದೆ. ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಮಾತನಾಡಿದ್ದೆ. ಆಗಲೂ ಬೆದರಿಕೆ ಕರೆ ಬಂದಿದ್ದವು. ಈ ಹಿಂದೆ ಸಹ ದೂರು ನೀಡಿದ್ದೆ, ಇಂಟರ್ನೆಟ್ ಮೂಲಕ ಕರೆ ಬರುತ್ತಿವೆ, ಹೀಗಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಈ ಕುರಿತು ದೆಹಲಿಯಲ್ಲಿ ಸಹ ದೂರು ನೀಡಿದ್ದೇನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕಾರಿ ಸಮಿತಿಯ ಸಾಮಾಜಿಕ ಜಾಲತಾಣದ ಕುರಿತ ಸಭೆಯಲ್ಲಿ ಸಹ ದೂರು ನೀಡಿದ್ದೇನೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.