ಬೆಂಗಳೂರು, ಜೂನ್ 9: ಗೋಕುಲ್ ದಾಸ್ ಎಕ್ಸ್ ಪೋರ್ಟ್ಸ್ ನ ಗಾರ್ಮೆಂಟ್ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಗೋಕುಲ್ ದಾಸ್ ಎಕ್ಸ್ ಪೋರ್ಟ್ಸ್ ಅಮೆರಿಕ ಹಾಗೂ ಯುರೋಪ್ ನ ಹಲವು ಬ್ರ್ಯಾಂಡ್ ಗಳಿಗೆ ಬಟ್ಟೆಗಳನ್ನು ಉತ್ಪಾದಿಸುವ ಮತ್ತು ಪೂರೈಸುವ ಗಾರ್ಮೆಂಟ್ ಕಂಪನಿ. ಇದು ಈಗಾಗಲೇ ಶ್ರೀರಂಗಪಟ್ಟಣದಲ್ಲಿ ಇರುವ ತನ್ನ ಘಟಕವನ್ನು ಮುಚ್ಚಿದ್ದು, ಗಾರ್ಮೆಂಟ್ ನ 1400ಕ್ಕೂ ಹೆಚ್ಚು ಕಾರ್ಮಿಕರನ್ನು ಉದ್ಯೋಗದಿಂದ ವಜಾಗೊಳಿಸಿದೆ.
ಯುರೋ ಕ್ಲಾಥಿಂಗ್ ಕಂಪೆನಿ- II (ECG) ಫ್ಯಾಕ್ಟರಿ ಮ್ಯಾನೇಜರ್ ಎಸ್. ಮಂಜುನಾಥ್ ಸಹಿ ಮಾಡಿರುವ ನೋಟಿಸ್ ನಲ್ಲಿ ಕೆಲಸದಿಂದ ಉದ್ಯೋಗಿಗಳನ್ನು ತೆಗೆಯುವ ಬಗ್ಗೆ ಮಾಹಿತಿ ಇದ್ದು, ಅದನ್ನು ಹೊರತು ಪಡಿಸಿ ಬೇರೆ ಯಾವುದೇ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ಜುಲೈ 1, 2010ರಲ್ಲಿ ದೇಶದಲ್ಲೇ ಅತಿ ದೊಡ್ಡ ಬಟ್ಟೆ ತಯಾರಿಕೆ ಸಂಸ್ಥೆ ಯುರೋ ಕ್ಲಾಥಿಂಗ್ ಕಂಪೆನಿ- II ಆರಂಭಗೊಂಡಿತು.

ಯುರೋ ಕ್ಲಾಥಿಂಗ್ ಕಂಪೆನಿ- II ಸಹಿ ಮಾಡಿರುವ ನೋಟಿಸ್ ನಲ್ಲಿ ಜೂನ್ 8, 2020ರಿಂದ ಅನ್ವಯ ಆಗುವಂತೆ ಶ್ರೀರಂಗಪಟ್ಟಣ ಘಟಕದ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲು ನಿರ್ಧರಿಸಲಾಗಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಕಂಪೆನಿಯ ವ್ಯವಹಾರ ಮತ್ತು ರಫ್ತಿನ ಮೇಲೆ ಕೆಟ್ಟ ಪರಿಣಾಮ ಬೀರಿದ್ದು ಹೊಸದಾಗಿ ಆರ್ಡರ್ ಗಳು ಬಂದಿಲ್ಲ. ಅಲ್ಲದೇ ರೀಟೇಲ್ ಮಳಿಗೆ, ಮಾಲ್ ಗಳು ಹಾಗೂ ಇತರ ವ್ಯಾಪಾರ- ವ್ಯವಹಾರಗಳು ಮುಚ್ಚಿರುವ ಕಾರಣದಿಂದ ಅರ್ಥಿಕತೆ ಕುಸಿದಿದೆ ಎಂದು ತಿಳಿಸಿದೆ. ಭಾರತದಲ್ಲಿನ ಚಿಲ್ಲರೆ ಮಾರಾಟಗಾರರು ಈ ವರ್ಷದ ಕೊನೆಯವರೆಗಿನ ಆರ್ಡರ್ ಗಳನ್ನು ರದ್ದು ಪಡಿಸಿರುವುದಾಗಿ ಪತ್ರದಲ್ಲಿ ಉಲ್ಲೇಖವಿದೆ.
ಕಾರ್ಮಿಕರ ಸಂಘಗಳು ಮತ್ತು ರಾಜ್ಯ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಮಾತುಕತೆ ನಡೆದಿದ್ದು ಕಂಪೆನಿ ಆಡಳಿತವು ತನ್ನ ಸ್ಥಗಿತಗೊಳಿಸುವ ಸೂಚನೆಯನ್ನು ಹಿಂಪಡೆಯಲು ಒಪ್ಪಿಕೊಂಡಿಲ್ಲ. ಕೆಲಸದಿಂದ ವಜಾಗೊಳಿಸಿರುವ ಹಿನ್ನಲೆಯಲ್ಲಿ ನೌಕರರು ಆಕ್ರೋಶ ಹೊರಹಾಕಿದ್ದು, ಯುರೋ ಕ್ಲೋತಿಂಗ್ ಕಂಪನಿ II ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.








