ಜೋ ಬಿಡನ್ ಅಧ್ಯಕ್ಷರಾದರೆ ಮತ್ತೊಂದು 9/11 ಪ್ರೇರಿತ ದಾಳಿ ಸಂಭವ – ಒಸಾಮಾ ಬಿನ್ ಲಾಡೆನ್ ಸೊಸೆ
ಸ್ವಿಟ್ಜರ್ಲೆಂಡ್, ಸೆಪ್ಟೆಂಬರ್07: ತನ್ನ ಮೊದಲ ಸಂದರ್ಶನದಲ್ಲಿ, ಒಸಾಮಾ ಬಿನ್ ಲಾಡೆನ್ ನ ಸೋದರ ಸೊಸೆ ನೂರ್ ಬಿನ್ ಲಾಡೆನ್, ಜೋ ಬಿಡನ್ ಅಧ್ಯಕ್ಷರಾಗಿ ಆಯ್ಕೆಯಾದರೆ ಮತ್ತೊಂದು 9/11 ಪ್ರೇರಿತ ದಾಳಿ ಸಂಭವಿಸಬಹುದು ಎಂದು ಹೇಳಿದ್ದಾರೆ ಹಾಗೂ ಡೊನಾಲ್ಡ್ ಟ್ರಂಪ್ ಮಾತ್ರ ಇದನ್ನು ತಡೆಯಲು ಸಾಧ್ಯ ಎಂದು ಹೇಳಿದ್ದಾರೆ.
33 ರ ಹರೆಯದ ನೂರ್ ಬಿನ್ ಲಾಡೆನ್, ಅಮೆರಿಕದ ಎಡಪಂಥೀಯರು ತಮ್ಮನ್ನು ಆಮೂಲಾಗ್ರವಾದದೊಂದಿಗೆ ಹೊಂದಿಸಿಕೊಂಡಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಐಸಿಸ್ ಯುರೋಪಿಗೆ ಬರಲು ಒಬಾಮಾ ಕಾರಣ ಮತ್ತು ಡೆಮಾಕ್ರಾಟಿಕ್ ಪಕ್ಷದ ಆಡಳಿತದಲ್ಲಿ ಅದು ಹೆಚ್ಚಾಗಿತ್ತು ಎಂದು ಹೇಳಿದ್ದಾರೆ. 2015 ರಲ್ಲಿ ಟ್ರಂಪ್ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸಿದಾಗ ನೂರ್ ಬಿನ್ ಲಾಡೆನ್ ಟ್ರಂಪ್ ಅವರ ಬೆಂಬಲಿಗರಾಗಿರುವುದಾಗಿ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯಲ್ಲಿ ಅಮೆರಿಕನ್ನರು ಸುರಕ್ಷಿತರಾಗಿದ್ದಾರೆಂದ ಅವರು ಭಯೋತ್ಪಾದಕರನ್ನು ಮೂಲದಲ್ಲಿ ಅಳಿಸಿಹಾಕುವ ಮೂಲಕ ಅಮೆರಿಕ ಮತ್ತು ನಮ್ಮನ್ನು ಟ್ರಂಪ್ ರಕ್ಷಿಸುತ್ತಿರುವುದಾಗಿ ಹೇಳಿದ್ದಾರೆ.
ನಾನು ದೂರದಿಂದ ಅವರನ್ನು ನೋಡಿದ್ದೇನೆ ಮತ್ತು ಈ ವ್ಯಕ್ತಿಯ ಸಂಕಲ್ಪವನ್ನು ಮೆಚ್ಚುತ್ತೇನೆ ಎಂದು ಸ್ವಿಟ್ಜರ್ಲೆಂಡ್ ನಲ್ಲಿ ವಾಸಿಸುವ ನೂರ್ ಬಿನ್ ಲಾಡೆನ್ ಡೊನಾಲ್ಡ್ ಟ್ರಂಪ್ ಬಗ್ಗೆ ತನ್ನ ಮೆಚ್ಚುಗೆ ಸೂಚಿಸಿದರು.
ಟ್ರಂಪ್ ಅನ್ನು ಮರು ಆಯ್ಕೆ ಮಾಡಬೇಕು ಎಂದು ಹೇಳಿದ ನೂರ್ ಬಿನ್ ಇದು ಅಮೆರಿಕ ಮಾತ್ರವಲ್ಲ, ಒಟ್ಟಾರೆ ಪಾಶ್ಚಿಮಾತ್ಯ ನಾಗರಿಕತೆಯ ಭವಿಷ್ಯಕ್ಕೂ ಬಹಳ ಮುಖ್ಯವಾಗಿದೆ ಎಂದರು.