ಚೆನ್ನೈ ಟೆಸ್ಟ್ – ಶತಕ ಸಿಡಿಸಿದ ಜಾಯ್ ರೂಟ್ ಮುಡಿಗೆ ಹಲವು ದಾಖಲೆಗಳ ಗರಿ…!
ಚೆನ್ನೈ ಟೆಸ್ಟ್ ಪಂದ್ಯದ ಮೊದಲ ದಿನದ ಆಕರ್ಷಣೆ ಜಾಯ್ ರೂಟ್ ಅವರ ಶತಕ. ಟೆಸ್ಟ್ ಕ್ರಿಕೆಟ್ ನಲ್ಲಿ 20ನೇ ಶತಕ ದಾಖಲಿಸಿದ್ದ ಸಂಭ್ರಮದಲ್ಲಿ ತೇಲಾಡಿದ್ರು. ಅಷ್ಟೇ ಅಲ್ಲ, ಜಾಯ್ ರೂಟ್ ಅವರು ನೂರನೇ ಟೆಸ್ಟ್ ಪಂದ್ಯವನ್ನು ಸ್ಮರಣೀವಾಗಿಸಿಕೊಂಡ್ರು.
ಹಾಗೇ ನೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಇಂಗ್ಲೆಂಡ್ ನ ಮೂರನೇ ಆಟಗಾರ ಹಾಗೂ ವಿಶ್ವದ 9ನೇ ಆಟಗಾರನಾಗಿ ಹೊರಹೊಮ್ಮಿದ್ರು.
ಈ ಹಿಂದೆ ಇಂಗ್ಲೆಂಡ್ ತಂಡದ ಪರ ಕಾಲಿನ್ ಕೌಡ್ರೆ ಮತ್ತು ಆಲೆಕ್ಸ್ ಸ್ಟುವರ್ಟ್ ಅವರು ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿ ಸಂಭ್ರಮಿಸಿದ್ದರು.
ಇನ್ನು ವಿಶ್ವ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ನ ಕಾಲಿನ್ ಕೌಡ್ರೆ, ಪಾಕಿಸ್ತಾನದ ಜಾವೇದ್ ಮಿಯಾಂದಾದ್, ವೆಸ್ಟ್ ಇಂಡೀಸ್ ನ ಗಾರ್ಡನ್ ಗ್ರಿನಿಚ್, ಇಂಗ್ಲೆಂಡ್ ನ ಆಲೆಕ್ಸ್ ಸ್ಟುವರ್ಟ್, ಪಾಕಿಸ್ತಾನದ ಇಂಜಮಮ್ ಉಲ್ ಹಕ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್, ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ ಈ ಸಾಧನೆ ಮಾಡಿದ್ದರು. ಇದೀಗ ಈ ಸಾಲಿಗೆ ಜಾಯ್ ರೂಟ್ ಕೂಡ ಸೇರಿಕೊಂಡಿದ್ದಾರೆ.
ಇನ್ನೊಂದೆಡೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ತನ್ನ ನೂರನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡೂ ಇನಿಂಗ್ಸ್ ಗಳಲ್ಲೂ ಶತಕ ದಾಖಲಿಸಿದ್ದರು. ಈ ದಾಖಲೆಯನ್ನು ಅಳಿಸಿ ಹಾಕುವಂತಹ ಅವಕಾಶವೂ ಜಾಯ್ ರೂಟ್ ಗಿದೆ.
ಮತ್ತೊಂದೆಡೆ ಈ ಶತಕದ ಮೂಲಕ ಜಾಯ್ ರೂಟ್ ಅವರು ಹಲವು ದಾಖಲೆಗಳನ್ನು ಮಾಡಿದ್ದಾರೆ. 20ನೇ ಶತಕದ ಜೊತೆಗೆ ವಿದೇಶಿ ನೆಲದಲ್ಲಿ ದಾಖಲಿಸಿರುವ 9ನೇ ಶತಕವೂ ಆಗಿದೆ. ಹಾಗೇ ನಾಯಕನಾಗಿ 9ನೇ ಶತಕ ಸಿಡಿಸಿದ್ದ ಸಾಧನೆಯನ್ನು ಮಾಡಿದ್ದಾರೆ.
ಚೆನ್ನೈ ನಲ್ಲಿ ಮೊದಲ ಟೆಸ್ಟ್ ದಾಖಲಿಸಿರುವ ರೂಟ್ ಅವರು ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಮೂರನೇ ಶತಕವನ್ನು ಸಿಡಿಸಿದ್ದ ಗೌರವಕ್ಕೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ಭಾರತ ವಿರುದ್ಧ ಸತತ ಮೂರನೇ ಶತಕ ಹಾಗೂ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿದ್ದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.








