ಕೋವಿಡ್ -19 ಶಿಷ್ಟಾಚಾರ ಉಲ್ಲಂಘನೆ- ಇಂಗ್ಲೆಂಡ್ ತಂಡದಿಂದ ಹೊರಬಿದ್ದ ಜೋಫ್ರಾ ಆರ್ಚರ್
ಕೋವಿಡ್-19 ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಿರುವ ಕಾರಣದಿಂದಾಗಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ಇಂಗ್ಲೆಂಡ್ ತಂಡದಿಂದ ಕೈಬಿಡಲಾಗಿದೆ. ಹೀಗಾಗಿ ಜೋಫ್ರಾ ಆರ್ಚರ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಕೊರೋನಾ ವೈರಸ್ ಸೋಂಕಿನ ಭೀತಿಯಿಂದಾಗಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಆಟಗಾರರಿಗೆ ಕೆಲವೊಂದು ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಸುರಕ್ಷತೆಯ ಹಿನ್ನೆಲೆಯಲ್ಲಿ ಎಲ್ಲಾ ಆಟಗಾರರು ಕೂಡ ಈ ಮಾರ್ಗಸೂಚಿಗಳನ್ನು ಪಾಲಿಸಬೇಕಿತ್ತು. ಆದ್ರೆ ಜೋಫ್ರಾ ಆರ್ಚರ್ ಅವರು ಬಯೋ ಸೆಕ್ಯೂರ್ ಪ್ರೋಟೋಕಾಲ್ (ಜೈವಿಕ ಸುರಕ್ಷತೆಯ ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಿದ್ದಾರೆ. ಇಂದಿನಿಂದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಎರಡನೇ ಟೆಸ್ಟ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ
ಇದೀಗ ಜೋಫ್ರಾ ಆರ್ಚರ್ ಅವರು ಐದು ದಿನಗಳ ಕಾಳ ಐಸೋಲೆಷನ್ನಲ್ಲಿರುತ್ತಾರೆ. ಅಲ್ಲದೆ ಎರಡು ಬಾರಿ ಕೋವಿಡ್ -19 ಟೆಸ್ಟ್ಗೆ ಒಳಪಡಲಿದ್ದಾರೆ. ಈ ಬಗ್ಗೆ ಜೋಫ್ರಾ ಆರ್ಚರ್ ಅವರು ಕ್ಷಮೆ ಕೂಡ ಕೋರಿದ್ದಾರೆ.
ನನ್ನಿಂದ ತಪ್ಪಾಗಿದೆ. ನನ್ನನ್ನು ಕ್ಷಮಿಸಿ. ನನ್ನಿಂದಾಗಿ ಇಡೀ ತಂಡ, ಟೀಮ್ ಮ್ಯಾನೇಜ್ಮೆಂಟ್ ಕೂಡ ಅಪಾಯಕ್ಕೆ ಸಿಲುಕಿದೆ. ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಪ್ರತಿಯೊಬ್ಬರಲ್ಲೂ ನಾನು ಕ್ಷಮೆ ಕೇಳುತ್ತಿದ್ದೇನೆ. ನನ್ನ ತಪ್ಪಿನ ಅರಿವು ನನಗಾಗಿದೆ. ಎರಡನೇ ಟೆಸ್ಟ್ ಪಂದ್ಯಕ್ಕೆ ನನ್ನ ಅನಿವಾರ್ಯತೆ ಇತ್ತು. ಕ್ಷಮಿಸಿ ಎಂದು ಆರ್ಚರ್ ಹೇಳಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ ತಂಡಕ್ಕೂ ಅರಿವು ಮೂಡಿಸಲಾಗಿದೆ. ಹಾಗೇ ಪಂದ್ಯದ ವೇಳೆ ತೆಗೆದುಕೊಂಡ ಕ್ರಮಗಳ ಬಗ್ಗೆ ವೆಸ್ಟ್ ಇಂಡೀಸ್ ತಂಡಕ್ಕೆ ತೃಪ್ತಿಯಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
25 ವರ್ಷದ ಜೋಫ್ರಾ ಆರ್ಚರ್ ಅವರು ಇಲ್ಲಿಯವರೆಗೆ ಎಂಟು ಟೆಸ್ಟ್ ಪಂದ್ಯಗಳನ್ನು ಮತ್ತು 14 ಏಕದಿನ ಪಂದ್ಯ ಮತ್ತು ಟಿ-ಟ್ವೆಂಟಿ ಪಂದ್ಯಗಳನ್ನು ಇಂಗ್ಲೆಂಡ್ ಪರ ಆಡಿದ್ದಾರೆ. ಒಟ್ಟು 58 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಇನ್ನು ಜೇಮ್ಸ್ ಆಂಡರ್ಸನ್ ಕೂಡ ಇಂಗ್ಲೆಂಡ್ ತಂಡದ 11ರ ಬಳಗದಲ್ಲಿಲ್ಲ. ಮೊದಲೇ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಸೋತಿದೆ. ಇದೀಗ ಆರ್ಚರ್ ಅನುಪಸ್ಥಿತಿ ಇಂಗ್ಲೆಂಡ್ ತಂಡಕ್ಕೆ ಕಾಡಲಿದೆ.








