ಆಕೆ ಜ್ಯೋತಿ ಕುಮಾರಿ. ವಯಸ್ಸು ಬರಿ 15 ವರ್ಷ, ಎಂಟನೇ ತರಗತಿ, ಊರು ಬಿಹಾರದ ದರ್ಬಾಂಗ್. ಲಾಕ್ ಡೌನ್ ನಿಂದ ಗುರುಗ್ರಾಮ್ ನಲ್ಲಿ ಕೆಲಸ ಮಾಡುತ್ತಿರುವ ಅಪ್ಪನೊಂದಿಗೆ ಸಂಕಷ್ಟಕ್ಕೆ ಸಿಲುಕಿದಳು. ಕೇವಲ ಏಳು ದಿನಗಳಲ್ಲಿ ಕ್ರಮಿಸಿದ ದೂರ ಬರೋಬರಿ 1200 ಕಿ.ಮೀ. ಅನಾರೋಗ್ಯದ ಅಪ್ಪನನ್ನು ಹಿಂದೆ ಕೂರಿಸಿ ಬರೋಬರಿ 1200 ಕಿ.ಮೀ ಅಧಿಕ ದೂರ ಸೈಕ್ಲಿಂಗ್ ಮಾಡಿ ಸ್ವಗ್ರಾಮಕ್ಕೆ ತಲುಪಿ ಇದೀಗ ವಿಶ್ವದ್ಯಾಂತ ಸುದ್ದಿಯಲ್ಲಿ ಇದ್ದಾಳೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಜ್ಯೋತಿ ಕುಮಾರಿ ಅವರ ಸ್ಥಿತಿಪ್ರಜ್ಞೆ ಮತ್ತು ದೃಢನಿಶ್ಚಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. “ಹದಿನೈದು ವಯಸ್ಸಿನ ಜ್ಯೋತಿ ತನ್ನ ಅನಾರೋಗ್ಯದ ತಂದೆಯೊಂದಿಗೆ ತನ್ನ ಸ್ವಗ್ರಾಮಕ್ಕೆ ಕೇವಲ ಏಳು ದಿನಗಳಲ್ಲಿ, ಸುಮಾರು 1200 ಕಿ.ಮೀ ಸೈಕ್ಲಿಂಗ್ ಮಾಡಿ, ನಮ್ಮೆಲ್ಲರನ್ನು ದಿಗ್ಭ್ರಮೆಗೊಳಿಸುವ ಹಾಗೆ ಮಾಡಿದರು.ಸಹಿಷ್ಣುತೆ ಮತ್ತು ಪ್ರೀತಿಯ ಈ ಸುಂದರವಾದ ಸಾಧನೆಯು ಭಾರತೀಯ ಜನರ ಕಲ್ಪನೆಯನ್ನು ಮತ್ತು ಸೈಕ್ಲಿಂಗ್ ಒಕ್ಕೂಟವನ್ನು ಸೆರೆಹಿಡಿದಿದೆ” ಎಂದು ಇವಾಂಕಾ ಟ್ವೀಟ್ ನಲ್ಲಿ ಬರೆದಿದ್ದಾರೆ.
ಲಾಕ್ ಡೌನ್ ನಿಂದಾಗಿ ಜ್ಯೋತಿ ಮತ್ತು ಆಕೆಯ ತಂದೆ ಆಟೋರಿಕ್ಷಾ ಚಾಲಕ ಗುರುಗ್ರಾಮ್ ನಲ್ಲಿ ಸಿಲುಕಿಕೊಂಡಿದ್ದರು. ಆಕೆಯ ತಂದೆಗೆ ಆಗಿದ್ದ ಗಾಯದಿಂದಾಗಿ ಅವನಿಗೆ ಯಾವುದೇ ಕೆಲಸವಿಲ್ಲ. ಇಂತಹ ಕಠಿಣ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವ ಪರಿವೆ ಇಲ್ಲದಾಗ ಈ ಛಲಗಾರ್ತಿ ಹೆಣ್ಣು ಮಗಳಿಗೆ ತಂದೆಯನ್ನು ಸುರಕ್ಷಿತವಾಗಿ ಊರಿಗೆ ಕರೆದುಕೊಂಡು ಹೋಗುವುದು ಹೇಗೆ ಎನ್ನುವ ಆಲೋಚನೆ ಬಿಟ್ಟರೆ ಮತ್ತೆ ಏನು ತೋಚಲಿಲ್ಲ. ಆಗಲೇ ಆಕೆ ದೃಢ ನಿರ್ಧಾರ ಮಾಡಿ ತನ್ನ ಸಂಪಾದನೆಯಲ್ಲಿ ಕೂಡಿಟ್ಟ ಅಲ್ಪ ಸ್ವಲ್ಪ ದುಡ್ಡಲ್ಲಿ ಸೈಕಲ್ ಅನ್ನು ಖರೀದಿಸಿ ಊರ ಕಡೆ ಮುಖಮಾಡಿದಳು. ಆಕೆ ತಂದೆಯನ್ನು ಹಿಂದೆ ಕೂರಿಸಿಕೊಂಡು ಬರೋಬರಿ 1200 ಕಿ.ಮೀ. ಸೈಕ್ಲಿಂಗ್ ಮಾಡಿ, ಕೇವಲ ಏಳು ದಿನಗಳಲ್ಲಿ ತನ್ನ ಸ್ವಗ್ರಾಮಕ್ಕೆ ತಲುಪಿದಳು.
ಈಕೆಯ ಸಾಧನೆಯನ್ನು ಗುರುತಿಸಿ ಇದೀಗ ರಾಷ್ಟ್ರೀಯ ಸೈಕ್ಲಿಂಗ್ ಫೆಡರೇಶನ್ ಹೆಚ್ಚಿನ ತರಬೇತಿಗೆ ದೆಹಲಿಗೆ ಬುಲಾವ್ ನೀಡಿದೆ.ಇದರೊಂದಿಗೆ ಆಕೆಗೆ ಬೇಕಾದ ಎಲ್ಲ ಅಗತ್ಯಗಳನ್ನು ರಾಜ್ಯ ಸೈಕ್ಲಿಂಗ್ ಫೆಡರೇಶನ್ ಚರ್ಚಿಸಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಕಂಬಳ ಓಟಗಾರ ಶ್ರೀನಿವಾಸ್ ಗೌಡರು ಕೆಸರು ಮಣ್ಣಿನಲ್ಲಿ ಸೃಷ್ಟಿಸಿದ ದಾಖಲೆ ಇದೆ ರೀತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಸೃಷ್ಟಿಸಿದ ಸುದ್ದಿ ಉಸೇನ್ ಬೋಲ್ಟ್ ಅವರೊಂದಿಗೆ ಹೋಲಿಕೆ ಮಾಡಲಾಗಿತ್ತು. ಏನೇ ಆಗಲಿ ಆಕೆಯ ಸಾಧನೆಗೆ ಹಾಗು ಮುಂದಿನ ಕ್ರೀಡಾ ಬದುಕಿಗೆ ಶುಭ ಹಾರೈಸೋಣ.








