ಮಧ್ಯಪ್ರದೇಶ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿ, ಕಾಂಗ್ರೆಸ್ ತೊರೆದು ಸರ್ಕಾರದ ಪತನಕ್ಕೆ ಕಾರಣವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಶೀಘ್ರದಲ್ಲೇ ಮತ್ತೆ ಕಾಂಗ್ರೆಸ್ ನತ್ತ ಮುಖಮಾಡಲಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಶುರುವಾಗಿವೆ. ಇದಕ್ಕೆ ಕಾರಣ ಸಿಂಧಿಯಾ ಅವರ ನಡೆ..!
ಹೌದು..! ಸಿಂಧಿಯಾ ಅವರು ಕಮಲ ಪಾಳಯ ಸೇರಿದ ಮೇಲೆ ಇಷ್ಟು ದಿನಗಳ ಕಾಲ ಅವರ ಟ್ವಿಟ್ಟರ್ ಖಾತೆಯಲ್ಲಿ ಬಿಜೆಪಿ ಅಂತಲೂ ಬರೆದುಕೊಂಡಿದ್ದರು. ಆದ್ರೆ, ಈಗ ಅವರ ಟ್ವಿಟ್ಟರ್ ಖಾತೆಯಲ್ಲಿ ಅದಿಲ್ಲ. ಇದೇ ಈಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಶೀಘ್ರದಲ್ಲಿಯೇ ಅವರ ಕೈ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಸಿಂಧಿಯಾ ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುವ ಕೆಲ ತಿಂಗಳುಗಳ ಮೊದಲು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಾಂಗ್ರೆಸ್ ನ ಹೆಸರನ್ನ ತೆಗೆದಿದ್ದರು. ಇದಾದ ಒಂದಷ್ಟು ತಿಂಗಳ ಬಳಿಕ ಅವರು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಿದ್ದರು. ಈಗ ಮತ್ತೆ ಅವರ ಖಾತೆಯಿಂದ ಬಿಜೆಪಿ ಪಕ್ಷದ ಹೆಸರು ಮಾಯವಾಗಿರುವುದರಿಂದ ಇಂಥದ್ದೊಂದು ಚರ್ಚೆ ಹುಟ್ಟಿಕೊಂಡಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ‘ಸಿಂಧಿಯಾ ಅವರಿಗೆ ಬಿಜೆಪಿಯಲ್ಲಿ ಉಸಿರುಗಟ್ಟಿದಂತಾಗಿದೆ. ಅವರು ಶೀಘ್ರ ದಲ್ಲೇ ಕಾಂಗ್ರೆಸ್‌ಗೆ ಮರಳಲಿದ್ದಾರೆ’ ಎಂದು ಸಿಂಧಿಯಾ ಅವರ ಆಪ್ತರಲ್ಲಿ ಒಬ್ಬ ರಾದ ಸತ್ಯೇಂದ್ರ ಯಾದವ್ ಹೇಳಿದ್ದಾರೆ. ಕಾಂಗ್ರೆಸ್ ಅನ್ನು ತ್ಯಜಿಸಿ ಸಿಂಧಿಯಾ ಅವರ ಜತೆಯಲ್ಲೇ ಬಿಜೆಪಿ ಸೇರ್ಪಡೆಯಾಗಿದ್ದ ಯಾದವ್ ಅವರು ಈಗಾಗಲೇ ಕಾಂಗ್ರೆಸ್‌ಗೆ ಮರಳಿದ್ದಾರೆ.








