ಕೋಲ್ಕತ್ತಾ: ದಿಗ್ಗಜ ಫುಟ್ಬಾಲ್ ಆಟಗಾರ ಪಿ.ಕೆ ಬ್ಯಾನರ್ಜಿ ಅವರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ದೀರ್ಘಕಾಲದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ಕೋಲ್ಕತ್ತಾದ ಮೆಡಿಕಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಮಾರ್ಚ್ 2ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ ಭಾಗದ ಜಲ್ಪೈಗುರಿಯಲ್ಲಿ ಜನಿಸಿದ ಬ್ಯಾನರ್ಜಿ ಜಮ್ಷೇಡ್ಪುರದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಸಂತೋಷ್ ಟ್ರೋಫಿಯಲ್ಲಿ ಬಿಹಾರ ಜರ್ಸಿ ಧರಿಸುವ ಮೂಲಕ ಫುಟ್ಬಾಲ್ ಕ್ರೀಡಾಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. 1960 ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಫ್ರಾನ್ಸ್ ವಿರುದ್ಧ ಅಸಾಧಾರಣ ಪ್ರದರ್ಶನ, 1962 ರ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ನೀಡಿದ್ದ ಪ್ರದರ್ಶನ ಸ್ಮರಣೀಯವಾಗಿದ್ದವು.
ಎರಡು ಬಾರಿಯ ಒಲಿಂಪಿಯನ್ ಮತ್ತು 1962ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿ ಬ್ಯಾನರ್ಜಿ ಅವರಿದ್ದರು. ಫುಟ್ಬಾಲ್ ಕ್ಷೇತ್ರದಲ್ಲಿ ಆಟಗಾರ ಮತ್ತು ತರಬೇತುದಾರರಾಗಿ ಗುರುತಿಸಿಕೊಂಡಿದ್ದ ಬ್ಯಾನರ್ಜಿ ದೇಶದ ಕ್ರೀಡೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದವರಲ್ಲಿ ಒಬ್ಬರಾಗಿದ್ದಾರೆ. ಪೂರ್ವ ಬಂಗಾಳ, ಮೋಹನ್ ಬಗಾನ್ ಮತ್ತು ರಾಷ್ಟ್ರೀಯ ತಂಡದ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ಬ್ಯಾನರ್ಜಿ ಆ ತಂಡದ ಸದಸ್ಯರು ಸ್ವರ್ಣ ವಿಜೇತರಾಗುವಂತೆ ಮಾಡಿದ್ದರು.








