ಬಿಎಸ್ ವೈ ಬಳಿಕ ನಾನು ಸಿಎಂ ಆಗ್ಬೇಕಿತ್ತು ಅಂತ ಸ್ವಾಮೀಜಿಗಳು ಹೇಳ್ತಿದ್ದಾರೆ : ಈಶ್ವರಪ್ಪ
ಬೆಂಗಳೂರು : ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಕಸರತ್ತು ಮುಂದುವರೆದಿದ್ದು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಉಪಮುಖ್ಯಮಂತ್ರಿ ಆಸೆ ವ್ಯಕ್ತಪಡಿಸಿದ್ದಾರೆ.
ತಮ್ಮ ಪರ ಸ್ವಾಮೀಜಿಗಳು ಬ್ಯಾಟ್ ಬೀಸುತ್ತಿರುವ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರ ಬಳಿಕ ನಾನು ಸಿಎಂ ಆಗಬೇಕಿತ್ತು ಎಂದು ಸ್ವಾಮೀಜಿಗಳು ಹೇಳುತ್ತಿದ್ದಾರೆ.
ಸಿಎಂ ಆಗಲಿಲ್ಲ ಹಾಗಾಗಿ ಡಿಸಿಎಂ ಆದರೂ ಆಗಲಿ ಎಂಬುದು ಸ್ವಾಮೀಜಿಗಳ ಅಭಿಪ್ರಾಯವಾಗಿದೆ.
ನಮ್ಮ ಪಕ್ಷ ಯಾವುದೋ ಒಬ್ಬ ವ್ಯಕ್ತಿ ಮೇಲೆ ನಿಂತಿಲ್ಲ. ಸಿದ್ಧಾಂತ, ಆದರ್ಶದ ಮೇಲೆ ನಿಂತಿದೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದರು.
ಇದೇ ವೇಳೆ ಬಾದಾಮಿಯಿಂದ ಈಶ್ವರಪ್ಪ ಪುತ್ರ ಸ್ಪರ್ಧೆ ಎಂಬ ಚರ್ಚೆ ವಿಚಾರವಾಗಿ ಮಾತನಾಡಿ, ನಾನು ಸಿದ್ದರಾಮಯ್ಯ ಕುಟುಂಬದವನಲ್ಲ.
ನಾನಾಗಲಿ, ನನ್ನ ಮಗ ಆಗಲಿ ಬಾದಾಮಿಯಿಂದ ಸ್ಪರ್ಧಿಸುವುದೂ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಮಗ ಎಂದು ಹೇಳಿ ಸಿದ್ದರಾಮಯ್ಯ ಅದೇ ಕ್ಷೇತ್ರದಲ್ಲಿ ಸೋತರು.
ಬಾದಾಮಿಗೆ ಬಂದ್ರು, ಬಾದಾಮಿ ಮಗ ಎಂದರು ಈಗ ಇನ್ಯಾವ ಕ್ಷೇತ್ರದತ್ತ ಮುಖ ಮಾಡುತ್ತಾರೆ ನೋಡಬೇಕು ಎಂದು ವ್ಯಂಗ್ಯವಾಡಿದರು.









