ನಮ್ಮ ತಂಟೆಗೆ ಬಂದ್ರೆ ಸುಮ್ಮನೇ ಇರೋದಿಲ್ಲ : ಈಶ್ವರಪ್ಪ
ಶಿವಮೊಗ್ಗ : ನಗರದಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಸಚಿವ ಕೆ ಎಸ್ ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಾತಿಗೆ ನಾನು ಬದ್ಧ.. ಯಾರಾದ್ರೂ ಹೊಡೆದ್ರೆ ಹೊಡೆಸಿಕೊಂಡು ಸುಮ್ಮನೇ ಕೂರಬೇಕಾ..? ಈಗ ಯಾರಾದ್ರೂ ನಮ್ಮ ತಂಟೆಗೆ ಬಂದ್ರೆ ಸುಮ್ಮನೇ ಇರೋದಿಲ್ಲ ಎಂದು ನಿನ್ನೆಯ ಹೇಳಿಕೆಯನ್ನೇ ಪುನರುಚ್ಚರಿಸಿದ್ದಾರೆ.
ತಮ್ಮ ಹೇಳಿಕೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ, ನಾವ್ಯಾರು ಯಾರು ತಂಟೆಗೆ ಹೋಗೋದಿಲ್ಲ. ಆದ್ರೆ ನಮ್ಮ ತಂಟೆಗೆ ಬಂದ್ರೆ ಬಿಡೋದಿಲ್ಲ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡ್ತಾರೆ, ಗೋವುಗಳನ್ನು ಹತ್ಯೆ ಮಾಡ್ತಾರೆ ಆಗೆಲ್ಲಾ ಸುಮ್ಮನೇ ಕೂರೋದಕ್ಕೆ ಆಗುತ್ತಾ ಎಂದು ಗುಡುಗಿದರು.
ಇನ್ನು ನಿನ್ನೆಯ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಯಾರೂ ಏನಾದ್ರೂ ತಿಳಿದುಕೊಳ್ಳಬಹುದು. ಒಂದು ಕಾಲದಲ್ಲಿ ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವೇ ಇತ್ತು. ಈಗ ಗ್ರಾಮಪಂಚಾಯ್ತಿಯಿಂದ ಹಿಡಿದು, ಎಲ್ಲಾ ಹಂತದಲ್ಲೂ ಇದೆ. ಅಷ್ಟರ ಮಟ್ಟಿಗೆ ಬೆಳೆದಿದೆ. ಈಗ ಯಾರಾದ್ರೂ ನಮ್ಮ ತಂಟೆಗೆ ಬಂದ್ರೆ ಸುಮ್ಮನೇ ಇರೋದಿಲ್ಲ ಎಂದು ಪುನರುಚ್ಚರಿಸಿದರು.