ನವದೆಹಲಿ : ಇಂದು ದೇಶದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರ ಚಿತ್ತ ಕೈ ಕಾರ್ಯಕಾರಿಣಿ ಸಭೆಯತ್ತ ನೆಟ್ಟಿದೆ. ಇಂದು 130 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಗೆ ಅತ್ಯಂತ ನಿರ್ಣಾಯಕ ದಿನ. ಎಐಸಿಸಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಇಂದು ಬೆಳಗ್ಗೆ 11 ಗಂಟೆಗೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದೆ.
ಲೋಕಸಭೆ ಚುನಾವಣಾ ಸೋಲಿನ ಬಳಿಕ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ರಾಹುಲ್ ಅಧ್ಯಕ್ಷರಾಗ್ತಾರಾ ಅಥವಾ ಪ್ರಿಯಾಂಕಾ ಗಾಂಧಿ ಬರ್ತಾರಾ ಅಥವಾ ಸೋನಿಯಾ ಕುಟುಂಬಸ್ಥರನ್ನು ಹೊರತು ಪಡಿಸಿದ ನಾಯಕರಿಗೆ ಸಾರಥ್ಯ ಸಿಗುತ್ತಾ ಎಂಬ ಕುತೂಹಲ ಮೂಡಿದೆ.
ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನ ಪಕ್ಷದಲ್ಲಿ ನಾಯಕತ್ವ ವಿಚಾರವಾಗಿ ಆಂತರಿಕ ಭಿನ್ನಮತ ಎದ್ದಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಸಂಸದರು ಮತ್ತು ಮಾಜಿ ಸಚಿವರ ಒಂದು ಬಣ ಸಾಮೂಹಿಕ ನಾಯಕತ್ವಕ್ಕೆ ಒತ್ತಾಯಿಸುತ್ತಿದ್ದರೆ, ಮತ್ತೊಂದು ಗುಂಪು ರಾಹುಲ್ ಗಾಂಧಿಯವರು ಮತ್ತೆ ಪಕ್ಷದ ಅಧ್ಯಕ್ಷರಾಗಬೇಕೆಂದು ಒತ್ತಾಯಿಸ್ತಿದೆ ಎನ್ನಲಾಗುತ್ತಿದೆ.
ಇತ್ತ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬಯೇತರು ಅಧ್ಯಕ್ಷರಾಗಬೇಕು ಎಂದು ಪ್ರಿಯಾಂಕಾ ಗಾಂಧಿ ಅವರು ಹೇಳಿದ್ದು, ಆ ಮೂಲಕ ಕಾಂಗ್ರೆಸ್ ನಾಯಕರ ಮಧ್ಯೆ ಅಧ್ಯಕ್ಷರು ಯಾರಾಗಬೇಕು ಎಂಬುದರ ಬಗ್ಗೆ ಗೊಂದಲ ಹೆಚ್ಚಿದೆ. ಇದರ ಮಧ್ಯೆ ಬೇರೆ ಬೇರೆ ರಾಜ್ಯಗಳಲ್ಲಿರುವ ಪ್ರಭಾವಿ ಕಾಂಗ್ರೆಸ್ ನಾಯಕರ ಹೆಸರುಗಳು ಕೂಡ ಚರ್ಚೆಗೆ ಬಂದಿದ್ದು, ಅದರಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಪಂಜಾಬ್ ಸಿಎಂ ಅಮರೀಂದರ್ ಸಿಂಗ್, ಸಂಸದ ಶಶಿ ತರೂರು ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.









