ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ..!
ರಾಯಚೂರು : 1 ದಿನದ ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ರಾಯಚೂರಿನ ಮಾನ್ವಿಯಲ್ಲಿ ಈ ಘಟನೆ ನಡೆದಿದೆ. ಮನೆಯ ಮುಂದೆಯೇ ಆಟವಾಡುತ್ತಿದ್ದ ಮಾನ್ವಿ ಮಾಜಿ ಶಾಸಕ ಹಂಪಯ್ಯ ನಾಯಕ್ ಅವರ ಮೊಮ್ಮಕ್ಕಳಾಗಿದ್ದ 9 ವರ್ಷದ ವರುಣ್ ಹಾಗೂ 5 ವರ್ಷದ ಸಣ್ಣಯ್ಯ ನಿನ್ನೆ ಮಧ್ಯಾಹ್ನದಿಂದ ಏಕಾಏಕಿ ನಾಪತ್ತೆಯಾಗಿದ್ದರು. ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಮಕ್ಕಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಬಾಲಕರ ಸುಳಿವಿರಲಿಲ್ಲ. ಇಂದು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇನ್ನೂ ಮೇಲ್ನೋಟಕ್ಕೆ ಆಟವಾಡುತ್ತಿದ್ದ ಮಕ್ಕಳು ಈಜಲೆಂದು ಕೆರೆಗೆ ಇಳಿದಿದ್ದಾರೆ. ನೀರಿನಲ್ಲಿ ಮುಳುಗಿ ಬಾಲಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.