ಕಲ್ಯಾಣ್ ಸಿಂಗ್ ವಿಧಿವಶ : ರಾಜ್ಯ ನಾಯಕರಿಂದ ಸಂತಾಪ
ಲಖನೌ : ಬಿಜೆಪಿಯ ಹಿರಿಯ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ವಿಧಿವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಯಾಣ್ ಸಿಂಗ್ ಅವರು ಎಸ್‍ಜಿಪಿಜಿಐಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 19ರಂದು, ಕಲ್ಯಾಣ್ ಸಿಂಗ್ ಸ್ಥಿತಿ ಗಂಭೀರವಾದ ಕಾರಣ ಅವರ ಕುಟುಂಬ ಸದಸ್ಯರನ್ನು ಕೂಡ ಆಸ್ಪತ್ರೆಗೆ ಕರೆಸಿಕೊಳ್ಳಲಾಗಿತ್ತು.
ಕಳೆದ 52 ದಿನಗಳಿಂದ ಸಿಂಗ್ ಅವರು ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಅವರ ಮೂತ್ರಪಿಂಡದ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತಾದರೂ, ಮತ್ತೊಮ್ಮೆ ಸ್ಥಿತಿ ಗಂಭೀರವಾಗಿತ್ತು. ಸೋಂಕಿನಿಂದಾಗಿ ಅವರ ಶ್ವಾಸಕೋಶವೂ ಸಹ ಹದಗೆಟ್ಟಿತ್ತು. ಮೂತ್ರಪಿಂಡ ವೈಫಲ್ಯದಿಂದಾಗಿ ಡಯಾಲಿಸಿಸ್ ಕೂಡ ಮಾಡಲಾಗಿತ್ತು.
ಆದ್ರೆ ನಿನ್ನೆ ತಡ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇನ್ನು ಕಲ್ಯಾಣ್ ಸಿಂಗ್ ನಿಧನಕ್ಕೆ ರಾಜ್ಯ ಬಿಜೆಪಿ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಸಂತಾಪ ಸಂದೇಶ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಟ್ವಿಟ್ಟರ್ ನಲ್ಲಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ, ರಾಜಸ್ಥಾನದ ಮಾಜಿ ರಾಜ್ಯಪಾಲರಾಗಿದ್ದ ಕಲ್ಯಾಣ್ ಸಿಂಗ್ ಅವರು ನಿಧನರಾದ ವಿಷಯ ತುಂಬಾ ದುಃಖ ತಂದಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಮತ್ತು ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಇನ್ನು ಬಿಜೆಪಿ ಹಿರಿಯ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಜೀ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ. ಹಿಂದುಳಿದ ಸಮುದಾಯಗಳ ಪ್ರಬಲ ಧ್ವನಿಯಾಗಿದ್ದ ಕಲ್ಯಾಣ್ ಸಿಂಗ್ ಅವರ ವರ್ಚಸ್ವಿ ನಾಯಕತ್ವ ಮತ್ತು ಸಾರ್ವಜನಿಕ ಜೀವನದಲ್ಲಿ ಸಮಗ್ರತೆಗಾಗಿ ಸದಾ ಎಲ್ಲರ ನೆನಪಾಗಿ ಉಳಿಯುತ್ತಾರೆ ಎಂದು ಮಾಜಿ ಸಿಎಂ ಬಿಎಸ್ ವೈ ಟ್ವೀಟ್ ಮಾಡಿದ್ದಾರೆ.









