ಭೋಪಾಲ್ : ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಅವರ ರಾಜಕೀಯ ಸಲಹೆಗಾರ ಆರ್.ಕೆ ಮಿಗ್ಲಾನಿ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಮಲ್ ನಾಥ್ ಅವರು ಸಹ ಈಗ ಕ್ವಾರೆಂಟೈನ್ ನಲ್ಲಿದ್ದಾರೆ.
ಆರ್.ಕೆ ಮಿಗ್ಲಾನಿ ಅವರ ಪುತ್ರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆ ಬಳಿಕ ಮಿಗ್ಲಾನಿ ಅವರಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಮಾ.23ರಂದು ಅವರನ್ನು ಸ್ಮಾರ್ಟ್ ಸಿಟಿ ಹಾಸ್ಪಿಟಲ್ ಗೆ ದಾಖಲಿಸಲಾಗಿತ್ತು. ಇಂದು ಅವರ ವೈದ್ಯಕೀಯ ವರದಿ ಬಂದಿದ್ದು, ಕೊರೊನಾ ಸೋಂಕು ದೃಢಪಟ್ಟಿದೆ.
ಅಂದ್ಹಾಗೆ ಮಾಜಿ ಸಿಎಂ ಕಮಲ್ ನಾಥ್ ಅವರು ಮಾರ್ಚ್.20ರಂದು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ, ಮಿಗ್ಲಾನಿ ಸೇರಿದಂತೆ ಮಧ್ಯಪ್ರದೇಶದ ಬಹುತೇಕ ಪತ್ರಕರ್ತರು ಭಾಗಿಯಾಗಿದ್ದರು. ಇದೇ ವೇಳೆ, ಕಾಂಗ್ರೆಸ್ ನ 200 ಶಾಸಕರು ಹಾಗೂ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಕೂಡ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸೋಂಕು ಹರಡುವ ಭೀತಿ ಎದುರಾಗಿದೆ.








