kane Williamson: ನಾಯಕತ್ವ ತೊರೆದ ಕೇನ್ ವಿಲಿಯಮ್ಸನ್ – ಸೌಥಿ ಹೊಸ ಸಾರಥಿ…
ನ್ಯೂಜಿಲೆಂಡ್ ತಂಡವನ್ನ ಟೆಸ್ಟ್ ಚಾಂಪಿಯನ್ ಪಟ್ಟಕ್ಕೇರುವಂತೆ ತಂಡ ಕಟ್ಟಿದ್ದ ಜೆಂಟಲ್ಮೆನ್ ಕ್ರಿಕೆಟರ್ ಕೇನ್ ವಿಲಿಯಮ್ಸನ್ ತಂಡದ ನಾಯಕತ್ವವನ್ನ ತ್ಯಜಿಸಿದ್ದಾರೆ. ಅವರ ಜಾಗಕ್ಕೆ ಟಿಮ್ ಸೌಥಿ ಅವರನ್ನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ವಿಲಿಯಮ್ಸನ್ ಏಕದಿನ ಮತ್ತು ಟಿ20 ನಾಯಕರಾಗಿ ಮುಂದುವರೆಯಲಿದ್ದಾರೆ. ನ್ಯೂಜಿಲೆಂಡ್ ತಂಡ ಮುಂದಿನ ವಾರ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ. ಟಾಮ್ ಲ್ಯಾಥಮ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ.
ಟಿಮ್ ಸೌಥಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ 31ನೇ ಟೆಸ್ಟ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಬ್ರೆಂಡನ್ ಮೆಕಲಮ್ ನಂತರ ಕೇನ್ ವಿಲಿಯಮ್ಸನ್ 2016 ರಲ್ಲಿ ತಂಡದ ಟೆಸ್ಟ್ ನಾಯಕತ್ವವನ್ನು ವಹಿಸಿಕೊಂಡರು. 38 ಪಂದ್ಯಗಳನ್ನ ಮುನ್ನಡೆಸಿ 22 ಬಾರಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಎಂಟು ಟೆಸ್ಟ್ ಡ್ರಾ ಆಗಿತ್ತು. ವಿಲಿಯಮ್ಸನ್ ನಾಯಕತ್ವದಲ್ಲಿ ಭಾರತವನ್ನು ಸೋಲಿಸುವ ಮೂಲಕ ನ್ಯೂಜಿಲೆಂಡ್ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಗೆದ್ದುಕೊಂಡಿತು.
ಇನ್ನು ಮುಂಬರುವ ಪಾಕಿಸ್ತಾನ ಪ್ರವಾಸದಲ್ಲಿ ನ್ಯೂಜಿಲೆಂಡ್ ಎರಡು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಬೇಕಿದೆ. ಡಿಸೆಂಬರ್ 26 ರಿಂದ ಕರಾಚಿ ಟೆಸ್ಟ್‌ನೊಂದಿಗೆ ಪ್ರವಾಸ ಆರಂಭವಾಗಲಿದೆ. ಮುಂದಿನ ವರ್ಷ ಜನವರಿ 3 ರಿಂದ 7 ರವರೆಗೆ ಮುಲ್ತಾನ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.
kane Williamson: Kane Williamson quits captaincy – Southee is the new charioteer…








