ತಮ್ಮ ಬಬ್ಲಿ ಲುಕ್ ನಿಂದಲೇ ಫೇಮಸ್ ಆಗಿ ಅಭಿಮಾನಿಗಳ ಮನ ಗೆದ್ದಿರುವ ಬುಲ್ ಬುಲ್ ಖ್ಯಾತಿಯ ರಚಿತಾ ರಾಮ್ ಈಗ ಡ್ರಗ್ ಡೀಲರ್ ಆಗಲು ಹೊರಟಿದ್ದಾರೆ. ಹೌದು ವಿಭಿನ್ನ ಪಾತ್ರಗಳತ್ತ ಮನಸ್ಸು ಮಾಡುತ್ತಿರುವ ರಚಿತಾ ಈಗ ಮಾದಕ ದ್ರವ್ಯ ಸಾಗಣೆದಾರಳ ಪಾತ್ರದಲ್ಲಿ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ತಮಿಳಿನ ಸೂಪರ್ ಹಿಟ್ ಸಿನಿಮಾವಾದ ಕೊಲಮಾವು ಕೋಕಿಲ ಸಿನಿಮಾವನ್ನು ಕನ್ನಡಕ್ಕೆ ರೀಮೇಕ್ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಖ್ಯಾತ ನಟಿ ನಯನತಾರಾ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕನ್ನಡದಲ್ಲಿ ರೀಮೇಕ್ ಆಗುತ್ತಿರುವ ಈ ಚಿತ್ರದಲ್ಲಿ ನಯನತಾರಾ ಅವರ ಪಾತ್ರವನ್ನು ರಚಿತಾ ರಾಮ್ ಅವರು ನಿಭಾಯಿಸಲಿದ್ದು, ರಚಿನಾ ರಾಮ್ ಅವರ ಡಿಫರೆಂಟ್ ಲುಕ್ ಹೇಗಿರಬಹುದೆಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿದೆ.
ಕನ್ನಡ್ ಗೊತ್ತಿಲ್ಲ ಚಿತ್ರಕ್ಕೆ ಆಕ್ಷನ್ ಹೇಳಿದ್ದ ನಿರ್ದೇಶಕ ಮಯೂರ್ ರಾಘವೇಂದ್ರ ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದು, ಚಿತ್ರದ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆಗಳು ಹುಟ್ಟುಕೊಂಡಿದೆ. ತಮಿಳಿನ ಚಿತ್ರದಲ್ಲಿ ಯೋಗಿ ಬಾಬು ಅವರು ಸಹ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇದೀಗ ಕನ್ನಡದಲ್ಲಿ ಅವರ ಪಾತ್ರಕ್ಕಾಗಿ ಆಯ್ಕೆ ನಡೆಯುತ್ತಿದೆ. ಮತ್ತೊಂದೆಡೆ ತಮಿಳಿನಲ್ಲಿ ನಟಿಸಿರುವ ಯೋಗಿ ಬಾಬು ಅವರನ್ನೇ ಈ ಚಿತ್ರಕ್ಕೆ ಕರೆ ತರುವ ಪ್ರಯತ್ನದಲ್ಲಿ ನಿರ್ದೇಶಕರಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಅಲ್ಲದೇ ಟೈಟಲ್ ವಿಚಾರದಲ್ಲಿ ಇನ್ನೂ ಗೊಂದಲವಿದ್ದು, ಪಂಕಜ ಕಸ್ತೂರಿ ಎಂಬ ಹೆಸರಿಡುವ ಪ್ಲಾನ್ ನಲ್ಲಿದ್ದಾರೆ ಎನ್ನಲಾಗುತ್ತಿದೆ.