ಕನ್ನಡದ ಕೋಟ್ಯಾದಿಪತಿಯಲ್ಲಿ ಭಾಗವಹಿಸಿದ್ದ ಯುವಕ ಸಾವು
ಬಾಗಲಕೋಟೆ : ಕನ್ನಡದ ಕೋಟ್ಯಾದಿಪತಿ ಶೋ ನಲ್ಲಿ ಭಾಗವಹಿಸಿದ್ದ ಜಿಲ್ಲೆಯ ಬೀಳಗಿ ತಾಲೂಕಿನ ಅಮಲಝರಿ ಗ್ರಾಮದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಿಮ್ಮಣ್ಣ ಗುರಡಿ (27) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ತಿಮ್ಮಣ್ಣ ಸಾಲದ ಹೊರೆಯನ್ನು ತಾಳಲಾರದೆ ಅಮಲಝರಿ ಗ್ರಾಮದ ಹೊರವಲಯದ, ಮುಧೋಳ ತಾಲೂಕಿನ ಮಂಟೂರ ವ್ಯಾಪ್ತಿಯ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಿಮ್ಮಣ್ಣ ಗುರಡಿ ಹೆಸ್ಕಾಂನಲ್ಲಿ ಲೈನ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ಇವರು ರಮೇಶ್ ಅರವಿಂದ್ ಅವರು ನಡೆಸಿಕೊಟ್ಟಿದ್ದ ಕನ್ನಡದ ಕೋಟ್ಯಾದಿಪತಿ ಶೋ ನಲ್ಲಿ ಭಾಗವಹಿಸಿ 6.40 ಲಕ್ಷ ರೂಪಾಯಿ ಗೆದ್ದುಕೊಂಡಿದ್ದರು. ಅಲ್ಲದೇ ತಿಮ್ಮಣ್ಣ ಗುರಡಿ ಟಿಕ್ ಟಾಕ್, ಹಾಸ್ಯ, ಸಂಗೀತದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಹಾಗೇ ಖೋ ಖೋ ಕ್ರೀಡಾಪಟು ಸಹ ಆಗಿದ್ದು, ಮಕ್ಕಳಿಗೆ ಖೋ ಖೋ ತರಬೇತಿ ನೀಡುತ್ತಿದ್ದರು ಎನ್ನಲಾಗುತ್ತಿದೆ.
ತಿಮ್ಮಣ್ಣ ಗುರಡಿ ಇತ್ತೀಚಿಗೆ ಹೊಸ ಮನೆ ಕಟ್ಟಿಸಿದ್ದ. ಮನೆ ಕಟ್ಟಿಸಲು 18 ಲಕ್ಷ ರೂಪಾಯಿ ಖರ್ಚು ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ತಿಮ್ಮಣ್ಣ ಮನೆ ಕಟ್ಟಿಸಲು ದುಡಿದ ಹಣದ ಜೊತೆ ಸಾಲ ಮಾಡಿಕೊಂಡಿದರು. ಸಾಲ ತೀರಸಲಾಗದೇ ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು (ಮೇ 5) ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಿಗದಿಯಾಗಿತ್ತು. ಗೃಹಪ್ರವೇಶಕ್ಕೆ ಬಬಲಾದಿ ಸ್ವಾಮೀಜಿಗೂ ಕೂಡ ಆಹ್ವಾನಿಸಿದ್ದರು. ಆದರೆ ತಿಮ್ಮಣ್ಣ ಆತ್ಮಹತ್ಯೆಗೆ ಶರಣಾಗಿರೋದು ಗ್ರಾಮಸ್ಥರಿಗೆ ಶಾಕ್ ನೀಡಿದೆ.