Kannada Medium : ಓದಿನಲ್ಲಿ ಹಿಂದುಳಿದ ಕನ್ನಡ ಮಾಧ್ಯಮ ಮಕ್ಕಳು – NCRCT ವರದಿಯಲ್ಲಿ ಬಹಿರಂಗ…
ಕನ್ನಡ ಮಾಧ್ಯಮದ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಶೇ.60ರಷ್ಟು ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎನ್ನವ ಅಂಶವನ್ನ NCERT ಬಹಿರಂಗಪಡಿಸಿದೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನಿಪುಣ್ ಭಾರತ್ ಅಡಿಯಲ್ಲಿ ನಡಸಿದ ಸಮೀಕ್ಷೆಯಲ್ಲಿ ಈ ಅಂಶಗಳು ತಿಳಿದುಬಂದಿವೆ. ಕನ್ನಡ ಮಾಧ್ಯಮದ ಶಾಲಾ ಮಕ್ಕಳನ್ನ ತಿಳುವಳಿಕೆ ಮತ್ತು ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿ ಸಮೀಕ್ಷೆಗೆ ಒಳಪಡಿಸಿದಾಗ ಸಾಮಾನ್ಯ ಶೈಕ್ಷಣಿಕ ಮಟ್ಟಕ್ಕಿಂತ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಬರೋಬ್ಬರಿ ಶೇ.60ರಷ್ಟು ಕನ್ನಡ ಮಾಧ್ಯಮದ ಮಕ್ಕಳು ಸಾಮಾನ್ಯ ಶೈಕ್ಷಣಿಕ ಮಟ್ಟಕ್ಕಿಂತ ಕಡಿಮೆ ಇದ್ದಾರೆ ಎನ್ನುವ ವರದಿ ಶಾಲಾ ಶಿಕ್ಷಕರು, ಮಕ್ಕಳ ಪೋಷಕರಿಗೆ ಆಘಾತ ತಂದಿದೆ.
ಸರ್ಕಾರಿ ಶಾಲೆಗಳು, ಅನುದಾನಿತ ಮತ್ತು ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. NCERT ಸಮೀಕ್ಷೆ ಪ್ರಕಾರ ಶೇ.18ರಷ್ಟು ಮಕ್ಕಳು 13 ಪದಗಳನ್ನು ಮಾತ್ರ ಓದಬಲ್ಲರಾಗಿದ್ದಾರೆ. ಶೇ. 38 ವಿದ್ಯಾರ್ಥಿಗಳು 14 ರಿಂದ 29 ಪದಗಳವರೆಗೆ ಓದುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಶೇ. 28 ರಷ್ಟು ಮಕ್ಕಳು 48 ಪದಗಳನ್ನು ಓದಿದರೆ, ಶೇ.16 ಕ್ಕಿಂತ ಕಡಿಮೆ ಮಕ್ಕಳು 49 ಪದಗಳನ್ನು ಮಾತ್ರ ಓದಬಲ್ಲವರಾಗಿದ್ದಾರೆ.
ಶೇ. 38 ರಷ್ಟು ಮಕ್ಕಳು ಮಾತ್ರ ಸೀಮಿತ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿದ್ದು ಓದುವಲ್ಲಿ ಉತ್ತಮವಾಗಿದ್ದಾರೆ ಎಂದು ವರದಿ ಹೇಳಿದೆ. ಹೀಗಾಗಿ ಕರ್ನಾಟಕ ಶಿಕ್ಷಣ ಇಲಾಖೆಯು ಶಾಲಾ ಶಿಕ್ಷಣ ವ್ಯವಸ್ಥೆಯ ತಳಹದಿಯಲ್ಲಿ ಶ್ರಮಿಸಬೇಕಾಗಿದೆ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.
Kannada Medium : Kannada medium children lagging behind in reading – revealed in NCRCT report…