ರಣಜಿ ಟೂರ್ನಿಯ ಗ್ರೂಪ್ – ಸಿ ಪಂದ್ಯದಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
ಹುಬ್ಬಳ್ಳಿಯ ಕೆಎಸ್ಸಿಎ ಕ್ರಿಕೆಟ್ ಗ್ರೌಂಡ್ನಲ್ಲಿ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕರ್ನಾಟಕ ತಂಡದ ಬೌಲರ್ ಗಳ ಆರ್ಭಟದ ಮುಂದೆ ಪಂಜಾಬ್ ಆಟಗಾರರು ಮಂಕಾದರು. ಪರಿಣಾಮ ತಂಡದ ಮೊತ್ತ ಕೇವಲ 89 ರನ್ ಆಗಿದ್ದಾಗ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ನೆಹಾಲ್ ವಧೇರ 44 ರನ್ ಸಿಡಿಸಿ ತಂಡದ ಮೊತ್ತ ಏರಿಕೆಯಾಗುವಂತೆ ಮಾಡಿದ್ದರು. ನಂತರ ತಂಡದ ಮೇಲೆ ಹಿಡಿತ ಸಾಧಿಸಿದ ಕರ್ನಾಟಕದ ಬೌಲರ್ ಗಳು ಕೇವಲ 152 ರನ್ ಗಳಿಗೆ ಎಲ್ಲ ವಿಕೆಟ್ ಉದುರುವಂತೆ ಮಾಡಿದರು. ಕರ್ನಾಟಕ ಪರ ವಾಸುಕಿ ಕೌಶಿಕ್ ಕೇವಲ 41 ರನ್ ನೀಡಿ 7 ವಿಕೆಟ್ ಪಡೆದು ಮಿಂಚಿದರು.
ನಂತರ ಬ್ಯಾಟಿಂಗ್ ಮುಂದುವರೆಸಿದ ಕರ್ನಾಟಕ ತಂಡಕ್ಕೆ ಕೂಡ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಮಯಾಂಕ್ ಅಗರ್ವಾಲ್ ಶೂನ್ಯಕ್ಕೆ ಔಟ್ ಆದರು. ರವಿಕುಮಾರ್ ಸಮರ್ಥ್ (38) ಹಾಗೂ ದೇವದತ್ ಪಡಿಕ್ಕಲ್ 2ನೇ ವಿಕೆಟ್ಗೆ 76 ರನ್ ಗಳ ಕಾಣಿಕೆ ನೀಡಿದರು. ನಂತರ ದೇವದತ್ತ ನಡೆದಿದ್ದೇ ದಾರಿ ಎನ್ನುವಂತಾಯಿತು. ಭರ್ಜರಿ ಬ್ಯಾಟಿಂಗ್ ಮುಂದವರೆಸಿದ ಪಡಿಕ್ಕಲ್ ಕೇವಲ 115 ಎಸೆತಗಳಲ್ಲಿಯೇ ಶತಕ ಸಿಡಿಸಿ ಬ್ಯಾಟ್ ಎತ್ತಿದರು. ಪಡಿಕಲ್ ಗೆ ಮನೀಶ್ ಪಾಂಡೆ ಉತ್ತಮ ಸಾಥ್ ನೀಡಿದರು. 142 ಎಸೆತಗಳಲ್ಲಿ ಮನೀಶ್ ಶತಕ ಸಿಡಿಸಿ ಔಟ್ ಆದರು. ಆದರೆ, ಪಡಿಕ್ಕಲ್ ಕೇವಲ 7 ರನ್ ಗಳಿಂದ ದ್ವಿಶತಕ ವಂಚಿತರಾದರು.
ಪಡಿಕ್ಕಲ್ 216 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 24 ಬೌಂಡರಿಗಳೊಂದಿಗೆ 193 ರನ್ ಸಿಡಿಸಿ ಔಟ್ ಆದರು. ಫೋರ್ಗಳೊಂದಿಗೆ 193 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಕೇವಲ 7 ರನ್ಗಳಿಂದ ದ್ವಿಶತಕ ವಂಚಿತರಾದರು.








