ರಾಜ್ಯದಲ್ಲಿ ಸ್ಥಳೀಯ ಯುವಕರ ಉದ್ಯೋಗ ಹಿತಾಸಕ್ತಿಗೆ ಮಹತ್ವದ ಹೆಜ್ಜೆಯಾಗಿ, ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಚರ್ಚೆಗೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತಾವಿತ ಯೋಜನೆಯಂತೆ, ವಿವಿಧ ಹುದ್ದೆಗಳಿಗೆ ವಿಭಿನ್ನ ಪ್ರಮಾಣದಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ವ್ಯವಸ್ಥಾಪಕ (Managerial) ಹುದ್ದೆಗಳಲ್ಲಿ 50%, ವ್ಯವಸ್ಥಾಪಕೇತರ (Non-Managerial) ಹುದ್ದೆಗಳಲ್ಲಿ 70%, ಇನ್ನು ಗ್ರೂಪ್ C ಮತ್ತು ಗ್ರೂಪ್ D ಹುದ್ದೆಗಳಿಗೆ 100% ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡುವ ಗುರಿ ಸರ್ಕಾರದ ಮುಂದಿದೆ.
ಈ ನಿರ್ಧಾರದ ಹಿಂದಿರುವ ಮುಖ್ಯ ಉದ್ದೇಶ, ರಾಜ್ಯದೊಳಗಿನ ಉದ್ಯೋಗಾವಕಾಶಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವುದು ಮತ್ತು ನಿರುದ್ಯೋಗ ಸಮಸ್ಯೆಯನ್ನು ನಿಯಂತ್ರಿಸುವುದಾಗಿದೆ.
ವಿಶೇಷವಾಗಿ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಹೊರರಾಜ್ಯದಿಂದ ಬರುವ ಉದ್ಯೋಗಿಗಳ ಪ್ರಮಾಣ ಹೆಚ್ಚಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಆದರೆ ಈ ಪ್ರಸ್ತಾವನೆ ಖಾಸಗಿ ಕ್ಷೇತ್ರದಲ್ಲಿ ಹೇಗೆ ಜಾರಿಯಾಗಲಿದೆ? ಕಾನೂನು ರೂಪ, ಕೈಗಾರಿಕೆಗಳ ಪ್ರತಿಕ್ರಿಯೆ ಮತ್ತು ಉದ್ಯಮಿಗಳ ಅಭಿಪ್ರಾಯವೇನು? ಎಂಬ ಪ್ರಶ್ನೆಗಳು ಕೂಡ ಎದುರಾಗಿದೆ. ಈ ಕುರಿತು ಸಂಪುಟ ಸಭೆಯ ನಂತರ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ.








