ಬೆಂಗಳೂರು : ಹಿಂದಿ ಪಕ್ಷ, ಹಿಂದಿ ಗುಲಾಮರು. ನಮಗೆ ಬಿಡಿ.. ನಿಮ್ಮ ಪಕ್ಷದವರಿಗಾದರೂ ಹಿಂದಿ ಅರ್ಥ ಆಗುತ್ತಾ..?, ಕನ್ನಡ ಎಲ್ಲಿದೆ ಮುಖ್ಯಮಂತ್ರಿಗಳೆ ?, ನಮ್ಮ ಭಾಷೆಯ ಅಭಿಮಾನ ಬಿಡಬೇಡಿ.. ಎಂದು ಟ್ವಿಟ್ಟರ್ ನಲ್ಲಿ ಕನ್ನಡಿಗರು ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಅಂದಹಾಗೆ ಸಿಎಂ ಬಿಎಸ್ ವೈ ವಿರುದ್ಧ ಕನ್ನಡಿಗರು ಮುಗಿಬೀಳಲು ಕಾರಣ, ಯಡಿಯೂರಪ್ಪ ಮಾಡಿದ ಟ್ವೀಟ್. ಹೌದು..! ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಸಿಎಂ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ”ನಮ್ಮ ಪಕ್ಷದಿಂದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಶ್ರೀ ಪ್ರತಾಪ್ ಸಿಂಹ ನಾಯಕ್, ಶ್ರೀ ಎಂ.ಟಿ.ಬಿ.ನಾಗರಾಜ್, ಶ್ರೀ ಆರ್.ಶಂಕರ್, ಶ್ರೀ ಸುನೀಲ್ ವಲ್ಯಾಪುರೆ ಅವರುಗಳಿಗೆ ಅಭಿನಂದನೆಗಳು.” ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಆದರೇ ಸಿಎಂ ಅವರ ಆ ಟ್ವೀಟ್ ನಲ್ಲಿ ಕನ್ನಡದ ಪ್ರಕಟಣೆಯ ಬದಲು ಹಿಂದಿ ಪ್ರಕಟಣೆಯನ್ನು ಹಂಚಿಕೊಂಡಿದ್ದಾರೆ!!.

ಇದು ಕನ್ನಡಿಗರ ಪಿತ್ತ ನೆತ್ತಿಗೇರುವಂತೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಿಂದಿ ವ್ಯಾಮೋಹವನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಹಿಂದೆ ಕೂಡ ವಲಸೆ ಕಾರ್ಮಿಕರ ಬಗ್ಗೆ ಸಿಎಂ ಬಿಎಸ್ ವೈ ಹಿಂದಿಯಲ್ಲಿ ಟ್ವೀಟ್ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.








