ದೆಹಲಿ ಹಿಂಸಾಚಾರ ವಿಚಾರವಾಗಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ರಾಜ್ಯಸಭೆಯಲ್ಲಿ ದೆಹಲಿ ಹಿಂಸಾಚಾರದ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಸಿಬಲ್, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಹಲವು ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. “ನೀವು ಗೋವುಗಳನ್ನು ರಕ್ಷಿಸಲು ಏನು ಬೇಕಾದರೂ ಮಾಡಬಲ್ಲಿರಿ ಆದರೆ ಮನುಷ್ಯರನ್ನಲ್ಲ” ಎಂದು ಹೇಳುವ ಮೂಲಕ ಸಿಬಲ್ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.

ಅಲ್ಲದೆ “ಎಫ್‌ಐಆರ್ ದಾಖಲಿಸಲು ಇದು ಸೂಕ್ತ ಸಮಯವಲ್ಲ ಎಂದು ನಿಮ್ಮ ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ಹೇಳಿದ್ದಾರೆ. ಎಫ್‌ಐಆರ್ ದಾಖಲಿಸಲೂ ಸೂಕ್ತ ಸಮಯವಿದೆಯೇ ನನಗೆ ಕಾನೂನು ಕಲಿಸಿ” ಎಂದು ಸಿಬಲ್ ವ್ಯಂಗ್ಯವಾಡಿದರು.
ಇನ್ನು “ಕಾಶ್ಮೀರದಲ್ಲಿ ಬಂಧಿತರಾಗಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಅವರನ್ನು ಬಿಡುಗಡೆಗೊಳಿಸಿದರೆ ಜಮ್ಮು ಕಾಶ್ಮೀರದಲ್ಲಿ ಹಿಂಸೆ ತಾಂಡವವಾಡಬಹುದು ಎಂದು ಹೇಳುವ ನೀವು ಜನರನ್ನು ಪ್ರಚೋದಿಸುವ ನಿಮ್ಮ ಪಕ್ಷದ ಸದಸ್ಯರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ?” ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.








