ಉಡುಪಿ : ಕೊರೊನಾ ಹೊಡೆತಕ್ಕೆ ಇಡೀ ದೇಶವೇ ಸ್ತಬ್ಧವಾಗಿದೆ. ಸೋಂಕು ಹರಡುವುದನ್ನ ತಡೆಯಲು ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಗಿದೆ. ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ಮನವಿ ಮಾಡುತ್ತಲೇ ಇದೆ. ಲಾಕ್ ಡೌನ್ ಹಿನ್ನೆಲೆ ಜನಸಾಮಾನ್ಯರೆಲ್ಲಾ ಮನೆಯೊಳಗಡೆ ಬಂಧಿಯಾಗಿದ್ದಾರೆ. ಈ ಸಂದರ್ಭದಲ್ಲಿ ಬಡವರ್ಗದ ಜನರಿಗೆ ನೆರವಾಗುವುದು ಬಿಟ್ಟು, ಕಾರ್ಕಳ ಶಾಸಕ “ಮನೆಮನೆಗಳಲ್ಲಿ ಮೆಹಂದಿ ಅಭಿಯಾನ’ ಹಮ್ಮಿಕೊಂಡಿದ್ದಾರೆ.
ಹೀಗಾಗಿ ಶಾಸಕರೇ ಲಾಕ್ ಡೌನ್ ಸಂದರ್ಭದಲ್ಲಿ ಮೆಹಂದಿ ಅಭಿಯಾನ ಬೇಕಿತ್ತಾ? ಎಂದು ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ ಇದರ ವತಿಯಿಂದ “ಮನೆಮನೆಗಳಲ್ಲಿ ಮೆಹಂದಿ ಅಭಿಯಾನ’ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ವಿರುದ್ಧ ನೆಟ್ಟಿಗರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಸಂಕಷ್ಟದ ಸಂದರ್ಭದಲ್ಲಿ ಬಡವರ್ಗದ ಜನರಿಗೆ ನೆರವಾಗುವುದು ಬಿಟ್ಟು, ಮೆಹಂದಿ ಬಿಡಿಸಿ ಜನರಿಗೆ ಸಂದೇಶ ಕೊಡುವುದು ಎಷ್ಟು ಸರಿ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.