• ಒಂದು ಅಪಾರ್ಟ್ಮೆಂಟ್ ಗೆ ಒಂದೇ ಅಸೋಸಿಯೇಷನ್
• ಸಾಮಾನ್ಯ ಪ್ರದೇಶಗಳ ಮೇಲಿನ ಹಕ್ಕು
• ವ್ಯಾಜ್ಯ ಇತ್ಯರ್ಥಕ್ಕೆ ಸಕ್ಷಮ ಪ್ರಾಧಿಕಾರಗಳ ಸ್ಥಾಪನೆ
• ಕಟ್ಟಡ ಮರುನಿರ್ಮಾಣಕ್ಕೆ ಅಂತಿಮ ಸ್ಪಷ್ಟತೆ
ಬೆಂಗಳೂರು – ಅಪಾರ್ಟ್ಮೆಂಟ್ ನಿವಾಸಿಗಳ ಹಿತರಕ್ಷಣೆಯನ್ನು ಕಾಪಾಡುವ ಹಾಗೂ ಅವರಿಗೆ ಶಾಸನಬದ್ಧ ಹಕ್ಕುಗಳನ್ನು ಒದಗಿಸುವ ಸಲುವಾಗಿ 2026ನೇ ಸಾಲಿನ ‘ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕʼವನ್ನು ಮಂಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ‘2026ನೇ ಸಾಲಿನ ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕʼವನ್ನು ಮಂಡಿಸಿ ವಿವರಣೆ ನೀಡಿದ ಅವರು, “ರಾಜ್ಯದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಅಪಾರ್ಟ್ಮೆಂಟ್ ಸಂಸ್ಕೃತಿ, ನಿವಾಸಿಗಳು ಎದುರಿಸುತ್ತಿರುವ ನಿರಂತರ ಆಡಳಿತಾತ್ಮಕ ಗೊಂದಲಗಳು ಹಾಗೂ ಡೆವಲಪರ್ಗಳ ಮಿತಿಮೀರಿದ ಧೋರಣೆಗೆ ಶಾಶ್ವತ ಮುಕ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ವಸತಿ ಸಮುಚ್ಚಯಗಳನ್ನು ನಿಯಂತ್ರಿಸುವ ಮತ್ತು ನಿವಾಸಿಗಳಿಗೆ ಶಾಸನಬದ್ಧ ಹಕ್ಕುಗಳನ್ನು ಒದಗಿಸುವ ಸಲುವಾಗಿ ಈ ಮಹತ್ವದ ವಿಧೇಯಕವನ್ನು ಜಾರಿಗೊಳಿಸಲಾಗುತ್ತಿದೆ” ಎಂದರು.
“ನಮ್ಮ ರಾಜ್ಯದಲ್ಲಿ ನಗರ ಬೆಳೆದಂತೆಲ್ಲಾ ಭೂಮಿ ಅತ್ಯಂತ ಸೀಮಿತ ಹಾಗೂ ಮೌಲ್ಯಯುತ ಸಂಪನ್ಮೂಲವಾಗಿದೆ. ಪರಿಣಾಮವಾಗಿ ಬಹುತೇಕ ನಾಗರಿಕರು ಅಪಾರ್ಟ್ಮೆಂಟ್ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, 1972-73ರ ಹಳೆಯ ಕಾಯ್ದೆಗಳು ಹಾಗೂ ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ರೇರಾ (RERA) ನಿಯಮಗಳು ಪ್ರಸ್ತುತ ಚಾಲ್ತಿಯಲ್ಲಿರುವ ಇಂದಿನ ಸಂಕೀರ್ಣ ಸಮಸ್ಯೆಗಳಿಗೆ ಸ್ಪಂದಿಸಲು ವಿಫಲವಾಗಿವೆ” ಎಂದು ಕಳವಳ ವ್ಯಕ್ತಪಡಿಸಿದರು.
“ಒಂದೇ ಅಪಾರ್ಟ್ಮೆಂಟ್ನಲ್ಲಿ ಎರಡು-ಮೂರು ಸಂಘಗಳು ನೋಂದಣಿಯಾಗಿ ನಿವಾಸಿಗಳ ನಡುವೆ ವ್ಯಾಜ್ಯಗಳು ಸೃಷ್ಟಿಯಾಗುತ್ತಿವೆ. ನಿವಾಸಿಗಳು ಹಾಗೂ ಕಟ್ಟಡ ನಿರ್ಮಾಣಕಾರರ (ಬಿಲ್ಡರ್) ನಡುವೆ ಕಾಮನ್ ಜಾಗಗಳು, ರಸ್ತೆಗಳು ಹಾಗೂ ಕಾಂಪೌಂಡ್ ಗೋಡೆಗಳ ಮಾಲೀಕತ್ವ ಯಾರಿಗೆ ಸೇರಬೇಕು ಎನ್ನುವ ಗೊಂದಲಗಳಿವೆ. ಹಳೆಯ ಕಟ್ಟಡಗಳ ಮರುನಿರ್ಮಾಣಕ್ಕೆ ಸೂಕ್ತ ಕಾನೂನು ವ್ಯವಸ್ಥೆ ಇರಲಿಲ್ಲ. ಈ ಎಲ್ಲಾ ಗೊಂದಲ ಹಾಗೂ ಕುಂದುಕೊರತೆಗಳನ್ನು ನಿವಾರಿಸಲು ಹಳೆಯ ಕಾನೂನಲ್ಲಿ ಸೂಕ್ತ ಪರಿಹಾರ ಇಲ್ಲ.
ಹೀಗಾಗಿ ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗಲೇ ಅಪಾರ್ಟ್ಮೆಂಟ್ ನಿವಾಸಿಗಳ ಜೊತೆ ಒಂದು ಸಭೆ ನಡೆಸಲಾಗಿತ್ತು. ಎರಡು ತಿಂಗಳ ಹಿಂದೆ ಸಹ ಅಪಾರ್ಟ್ಮೆಂಟ್ ನಿವಾಸಿಗಳ ಜೊತೆ ಮತ್ತೊಂದು ಸಭೆ ನಡೆಸಿ ಸಲಹೆ-ಸೂಚನೆಗಳನ್ನು ಪಡೆಯಲಾಗಿತ್ತು. ಈ ಎಲ್ಲಾ ಸಲಹೆ ಸೂಚನೆಗಳನ್ನು ಪರಿಗಣಿಸಿ ಅತ್ಯಂತ ಪರಿಪಕ್ವವಾದ ಕರಡು ವಿಧೇಯಕವನ್ನು ಸಿದ್ಧಪಡಿಸಿ ಅದನ್ನೂ ಸಹ ಸಾರ್ವಜನಿಕರ ಚರ್ಚೆಗೆ ಅವಕಾಶ ಮಾಡಿಕೊಟ್ಟು, ಅಲ್ಲಿಂದ ಬಂದಂತಹ ಪ್ರತಿಕ್ರಿಯೆಗಳನ್ನು ಪರಿಗಣಿಸಿ ನೂತನ ವಿಧೇಯಕ ಮಂಡಿಸಲಾಗಿದೆ” ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ವಿಧೇಯಕದ ಪ್ರಮುಖ ಅಂಶಗಳು:
ಒಂದೇ ಅಪಾರ್ಟ್ಮೆಂಟ್ ಗೆ ಒಂದೇ ಅಸೋಸಿಯೇಷನ್: ಇನ್ಮುಂದೆ ಪ್ರತಿಯೊಂದು ಅಪಾರ್ಟ್ಮೆಂಟ್ ಯೋಜನೆಗೂ ಒಂದೇ ನೋಂದಾಯಿತ ಕ್ಷೇಮಾಭಿವೃದ್ಧಿ ಸಂಘ (RWA) ಇರಲಿದ್ದು, ಆ ಸಂಘ ವಿಧೇಯಕದಲ್ಲಿ ನಿರೂಪಿಸಲಾಗಿರುವ ಕಾನೂನಿನ ಅಡಿಯಲ್ಲೇ ನೋಂದಣಿಯಾಗಬೇಕು. ಇತರೆ ಕಾನೂನುಗಳಡಿ ಪ್ರತ್ಯೇಕ ಸಂಘಗಳನ್ನು ರಚಿಸುವುದಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಸಾಮಾನ್ಯ ಪ್ರದೇಶಗಳ ಮೇಲಿನ ಹಕ್ಕು: ಕಾಮನ್ ಜಾಗಗಳು, ರಸ್ತೆಗಳು ಮತ್ತು ಮುಕ್ತ ಪ್ರದೇಶಗಳನ್ನು ಖಾಸಗಿಯಾಗಿ ಮಾರಾಟ ಮಾಡಲು ಅಥವಾ ಬದಲಾಯಿಸಲು ಡೆವಲಪರ್ಗಳಿಗೆ ಅವಕಾಶವಿಲ್ಲ. ಇವುಗಳ ಉಸ್ತುವಾರಿಯನ್ನು ಕಡ್ಡಾಯವಾಗಿ ನಿವಾಸಿಗಳ ಸಂಘಕ್ಕೆ ಹಸ್ತಾಂತರಿಸಬೇಕು.
ಸಕ್ಷಮ ಪ್ರಾಧಿಕಾರಗಳ ಸ್ಥಾಪನೆ: ಸ್ಥಳೀಯ ಮಟ್ಟದಲ್ಲಿ (ಗ್ರಾಮ ಪಂಚಾಯತಿ, ಪುರಸಭೆ ಹಾಗೂ ಮಹಾನಗರ ಪಾಲಿಕೆ) ವ್ಯಾಜ್ಯಗಳ ವಿಲೇವಾರಿಗೆ ‘ಸಕ್ಷಮ ಪ್ರಾಧಿಕಾರ’ (Competent Authority) ಹಾಗೂ ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಿಸಲಾಗುವುದು. ಇವುಗಳಿಗೆ ನಾಗರಿಕ ನ್ಯಾಯಾಲಯದ (Civil Court) ಅಧಿಕಾರವಿರುತ್ತದೆ.
ಕಟ್ಟಡ ಮರುನಿರ್ಮಾಣಕ್ಕೆ (Re-development) ಅಂತಿಮ ಸ್ಪಷ್ಟತೆ: ಹಳೆಯ ಹಾಗೂ ಸುಸ್ಥಿತಿಯಲ್ಲಿಲ್ಲದ ಕಟ್ಟಡಗಳನ್ನು ಮರುನಿರ್ಮಾಣ ಮಾಡಲು ಶೇ.75 ರಷ್ಟು ಮಾಲೀಕರ ಸಮ್ಮತಿ ಕಡ್ಡಾಯ. ಮರು ನಿರ್ಮಾಣಕ್ಕೆ ಒಪ್ಪದ ಮಾಲೀಕರಿಗೆ ಸ್ವತಂತ್ರ ಮೌಲ್ಯಮಾಪನದ ಮೂಲಕ ಚಾಲ್ತಿಯಲ್ಲಿರುವ ಮಾರುಕಟ್ಟೆ ದರದ ಎರಡು ಪಟ್ಟು ಪರಿಹಾರ ನೀಡಿ ಆಸ್ತಿ ಖರೀದಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ.







