ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಹಗುರವಾಗಿ ಮಾತನಾಡಿದ್ದ ಶಾಸಕ ಪ್ರಿಯಾಂಕ್ ಖರ್ಗೆ (Naalayak Son) ವಿರುದ್ಧ ರಾಜ್ಯ ಚುನಾವಣಾ ಆಯೋಗ್ಕಕೆ ಬಿಜೆಪಿಯಿಂದ ದೂರು ಸಲ್ಲಿಕೆಯಾಗಿದೆ.
ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ಪ್ರಧಾನಿ ನಾಲಾಯಕ್ ಮಗ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ ಶಾಸಕನ ವಿರುದ್ಧ ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ದೂರು ದಾಖಲಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿಗಳ ಮೇಲೆ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಮಾದರಿ ನೀತಿ ಸಂಹಿತೆ ನಿಯಮ ಉಲ್ಲಂಘಿಸಿದ್ದಾರೆ. “ನಾಲಾಯಕ್” ಎಂದರೆ ಅಪ್ರಯೋಜಕ ಎಂದರ್ಥ. ಅಂತಹ ಪದವನ್ನು ಈ ದೇಶಕ್ಕಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರಧಾನಿಗಳ ವಿರುದ್ಧ ಬಳಸಿರುವುದು ಅಕ್ಷಮ್ಯ ಅಪರಾದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗಳನ್ನು ವಿಷದ ಹಾವು ಎಂದು ನಿಂದಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ಖರ್ಗೆ ಅವರ ಪುತ್ರರೂ ಆದ ಶಾಸಕ ಪ್ರಿಯಾಂಕ್ ಖರ್ಗೆ ಮತ್ತೊಂದು ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.








