ಬೆಂಗಳೂರು: ವಿಧಾನಸಭೆ ಚುನಾವಣೆ(Karnataka Assembly Election)ಗೆ ದಿನಗಣನೆ ಆರಂಭವಾಗಿದ್ದು, ಎಲ್ಲ ಪಕ್ಷಗಳು ಪ್ರಚಾರ ನಡೆಸುತ್ತಿವೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯು ಏ. 25, 26 ರಂದು ವಿಶೇಷ ಮಹಾ ಪ್ರಚಾರ ಅಭಿಯಾನ ಹಮ್ಮಿಕೊಂಡಿದೆ ಎಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel) ಹೇಳಿದ್ದಾರೆ.
ಬಿಜೆಪಿಯಿಂದ ರಾಜ್ಯದ 224 ವಿಧಾನಸಭೆ ಕ್ಷೇತ್ರದಲ್ಲಿ ವಿಶೇಷ ಮಹಾ ಪ್ರಚಾರ ಅಭಿಯಾನ ನಡೆಯಲಿದ್ದು, 98 ಕೇಂದ್ರದ ನಾಯಕರು ಮತ್ತು 150ಕ್ಕೂ ಹೆಚ್ಚು ರಾಜ್ಯದ ನಾಯಕರು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಯಕರ್ತರಿಂದ ಮನೆ ಮನೆ ಭೇಟಿ, ರೋಡ್ ಶೋ, ಸಾರ್ವಜನಿಕರ ಜೊತೆ ಹಾಗೂ ಫಲಾನುಭವಿಗಳ ಜೊತೆ ಸಭೆ ಇರಲಿದೆ. ಈ ವೇಳೆ ರಾಷ್ಟ್ರದ ಪುರುಷರಿಗೆ ಮಾಲಾರ್ಪಣೆ, ಬೀದಿಗಳಲ್ಲಿ ಸಾರ್ವಜನಿಕ ಸಭೆ ಇರಲಿದ್ದು, ಅಭಿಯಾನದಲ್ಲಿ ಅಮಿತ್ ಶಾ, ನಡ್ಡಾ, ಅರುಣ್ ಸಿಂಗ್, ಯೋಗಿ ಆದಿತ್ಯನಾಥ್, ದೇವೇಂದ್ರ ಫಡ್ನವಿಸ್, ಅಣ್ಣಾಮಲೈ, ಸ್ಮೃತಿ ಇರಾನಿ, ಸಿ.ಟಿ. ರವಿ, ಯಡಿಯೂರಪ್ಪ, ಅಶೋಕ್, ಸೋಮಣ್ಣ, ಈಶ್ವರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಭಾಗೀರಥಿ ಮುರುಳ್ಯ, ಗುರುರಾಜ್ ಗಂಟಿಹೊಳೆ, ಈಶ್ವರ ಠಾಕೂರ್ ಅಂತಹ ಸಾಮಾನ್ಯ ಕಾರ್ಯಕರ್ತರಿಗೂ ಟಿಕೆಟ್ ನೀಡಿದ್ದೇವೆ. ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧೆ ವಿಚಾರದಲ್ಲಿ ಈಗಾಗಲೇ ಮಾತುಕತೆ ನಡೆಯುತ್ತಿದೆ. ಬಿಜೆಪಿ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಬಂಡಾಯ ಅಭ್ಯರ್ಥಿಗಳ ಜೊತೆಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.








