ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election 2023)ಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ಎಲ್ಲ ನಾಯಕರು ಶಕ್ತಿ ಮೀರಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ. ಹೀಗಾಗಿ ಇಂದು ಯಾವ ನಾಯಕರು ಎಲ್ಲಿ ಮತಬೇಟೆ ನಡೆಸಲಿದ್ದಾರೆ ಎಂಬುವುದನ್ನು ನೋಡೋಣ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಳ್ಳಾರಿ ನಗರದ ಕಪ್ಪಗಲ್ ರಸ್ತೆಯ ಸತ್ಯಂ ಕಾಲೇಜಿನ ಮುಂದೆ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಂತರ ತುಮಕೂರಿಗೆ ಹೋಗಲಿದ್ದಾರೆ. ಅಲ್ಲಿ ಜಿಲ್ಲೆಯ 11 ಕ್ಷೇತ್ರದ ಅಭ್ಯರ್ಥಿಗಳ ಪರ ಸಂಜೆ 5ಕ್ಕೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯುವ ಸಮಾವೇಶದಲ್ಲಿ ಮಾತನಾಡಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕಲಬುರಗಿಯ ಸೇಡಂನಲ್ಲಿ ಸಂಜೆ 5.30ಕ್ಕೆ ರಾಜಕುಮಾರ ಪಾಟೀಲ್ ತೇಲ್ಕೂರ್ ಪರ ಪ್ರಚಾರ ನಡೆಸುವರು. ಸಂಜೆ 6ಕ್ಕೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು.
ವರುಣಾದಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ಮತಬೇಟೆ ಮುಂದುವರೆಸಲಿದ್ದಾರೆ. ಅಲ್ಲದೇ, ಸ್ಟಾರ್ ಗಳೊಂದಿಗೆ ರೋಡ್ ಶೋ ನಡೆಸಲಿದ್ದಾರೆ. ವರುಣಾದ 23 ಗ್ರಾಮಗಳಲ್ಲಿ ನಟ ಶಿವರಾಜ್ಕುಮಾರ್, ದುನಿಯಾ ವಿಜಯ್, ಮಾಜಿ ಸಂಸದೆ, ನಟಿ ರಮ್ಯಾ ಸೇರಿದಂತೆ ಹಲವರು ಪ್ರಚಾರ ನಡೆಸಲಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಕಿಚ್ಚ ಸುದೀಪ್ ರೋಡ್ ಶೋ ನಡೆಸಲಿದ್ದಾರೆ. ನಂತರ ಮೈಸೂರಿನ ಟಿ ನರಸೀಪುರ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಪರ ವರುಣಾದಲ್ಲಿ ಪ್ರಚಾರ ನಡೆಸಲಿದ್ದಾರೆ. ಗರ್ಗೇಶ್ವರಿ, ಟಿ.ನರಸೀಪುರದಲ್ಲಿ ಪ್ರಚಾರ ನಡೆಸಿದ ನಂತರ ವರುಣಾದಲ್ಲಿ ರೋಡ್ ಶೋ ನಡೆಸುವರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಳೆ ಮೈಸೂರಿನ ಟಿ. ನರಸೀಪುರ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಸಕಲೇಶಪುರ, ಅರಕಲಗೂಡು, ಬೇಲೂರಿನಲ್ಲಿ ಪ್ರಾಚರ ನಡೆಸಲಿದ್ದಾರೆ.








