ಬೆಂಗಳೂರು : ಲೆಕ್ಕ ಪತ್ರ ಸಮಿತಿ ಪರಿಶೀಲನೆ ಕಾರ್ಯಕ್ಕೆ ಅಡ್ಡಿಯುಂಟು ಮಾಡುವ ಮೂಲಕ ಭ್ರಷ್ಟಚಾರಕ್ಕೆ ಬೆಂಬ; ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪಕ್ಕೆ ಕರ್ನಾಟಕ ವಿಧಾನ ಸಭೆ ಸಚಿವಾಲಯ ಸ್ಪಷ್ಟನೆ ನೀಡಿದೆ.
ಈ ವಿಚಾರವಾಗಿ ಸ್ಪಷ್ಟೀಕರಣ ನೀಡಿದ ಸಚಿವಾಲಯ, ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನ ವೈರಾಣುವಿನ (ಕೋವಿಡ್-19) ಪರಿಣಾಮವನ್ನು ಗಮನಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಸಂಬಂಧ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಹೊರಡಿಸಲಾದ ಮಾರ್ಗಸೂಚಿಗಳನ್ನು ಪರಿಗಣಿಸಿ ಲಾಕ್ಡೌನ್ ಸಂದರ್ಭದಲ್ಲಿ ತಾತ್ಕಾಲಿಕವಾಗಿ ವಿಧಾನ ಮಂಡಲ ಹಾಗೂ ವಿಧಾನಸಭೆಯ ಸಮಿತಿಗಳು ಸಭೆಗಳನ್ನು ನಡೆಸುವುದನ್ನು ಸ್ಥಗಿತಗೊಳಿಸಲಾಗಿತ್ತು.
ನಂತರ ಹಂತ ಹಂತವಾಗಿ ರಾಜ್ಯದಲ್ಲಿ ಲಾಕ್ಡೌನ್’ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ದಿನಾಂಕ: 18-05-2020ರ ನಂತರ ಸಮಿತಿ ಸಭೆಗಳನ್ನು ನಡೆಸಲು ಮಾತ್ರ ಅವಕಾಶ ಕಲ್ಪಿಸಲಾಯಿತು.ಸಮಿತಿ ಸಭೆಗಳನ್ನು ನಡೆಸುವಾಗ ಆದಷ್ಟು ಕೊರೊನ ವೈರಾಣುವನ್ನು (ಕೋವಿಡ್-19) ಹತೋಟಿಗೆ ತರಲು ತೊಡಗಿಸಿಕೊಂಡಿರುವ ಇಲಾಖೆಗಳನ್ನು ಹೊರತುಪಡಿಸಿ ಸಮಿತಿ ಸಭೆಗಳನ್ನು ನಡೆಸಲು ಸೂಚನೆಗಳನ್ನು ನೀಡಲಾಗಿತ್ತು.
ಸಮಿತಿಗಳು ಅಧ್ಯಯನ ಪ್ರವಾಸ ಮತ್ತು ಸ್ಥಳ ಪರಿಶೀಲನೆ ಕೈಗೊಂಡಾಗ ಸಮಿತಿಯ ಸದಸ್ಯರುಗಳು, ಇಲಾಖಾ ಅಧಿಕಾರಿಗಳು ಮತ್ತು ಸಾರ್ವಜನಿಕರು ಮುಕ್ತವಾಗಿ ಭೇಟಿ ಮಾಡುವ ಸಂದರ್ಭ ಉಂಟಾಗುವುದರಿಂದ ಕೊರೊನ (ಕೋವಿಡ್-19) ವೈರಾಣು ಹರಡುವಿಕೆಯ ಗಂಭೀರತೆಯನ್ನು ಪರಿಗಣಿಸಿ ಆರೋಗ್ಯದ ಹಿತದೃಷ್ಟಿಯಿಂದ ಸಮಿತಿಗಳು ರಾಜ್ಯದೊಳಗೆ ಅಥವಾ ಹೊರರಾಜ್ಯಗಳಲ್ಲಿ ಯಾವುದೇ ಅಧ್ಯಯನ ಪ್ರವಾಸವನ್ನು ಹಾಗೂ ಸ್ಥಳೀಯವಾಗಿ ಯಾವುದೇ ಭೇಟಿ ಅಥವಾ ಸ್ಥಳ ಪರಿಶೀಲನೆಗಳನ್ನು ನಡೆಸಬಾರದು ಎಂದು ತಡೆ ನೀಡಿತ್ತು.
ಅಲ್ಲದೆ ತಡೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ನೀಡಿದ್ದೀಯೇ ಹೊರತು ಅದರಲ್ಲಿ ಯಾವುದೇ ದುರುದ್ದೇಶ ಇಲ್ಲವೆಂದು ಕರ್ನಾಟಕ ವಿಧಾನಸಭೆ ಸಚಿವಾಲಯ ತಿಳಿಸಿದೆ.








