BJP | ಮಾಡಿದ ಪಾಪವನ್ನು ಒಪ್ಪಿಕೊಳ್ಳುವುದು ಮರ್ಯಾದಸ್ಥರ ಲಕ್ಷಣ
ಬೆಂಗಳೂರು : ಪಾಪಪ್ರಜ್ಞೆಯಿಂದ ಬಡಬಡಿಸುವುದನ್ನು ಬಿಟ್ಟು, ಮಾಡಿದ ಪಾಪವನ್ನು ಒಪ್ಪಿಕೊಳ್ಳುವುದು ಮರ್ಯಾದಸ್ಥರ ಲಕ್ಷಣ ಎಂದು ರಾಜ್ಯ ಬಿಜೆಪಿ ಬರೆದುಕೊಂಡಿದೆ.
ಪಿಎಸ್ಐ ಹಗರಣದ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಪಿಎಸ್ಐ ಹಗರಣದ ಆರೋಪಿಗಳ ವಿರುದ್ಧ ಕ್ಷಿಪ್ರನಡೆ ಭ್ರಷ್ಟಾಚಾರದ ವಿರುದ್ಧದ ಬಿಜೆಪಿಯ ಬದ್ಧತೆಗೆ ಸಾಕ್ಷಿ. ಇತಿಹಾಸದಲ್ಲೇ ಮೊದಲಿಗೆ ಅಪರಾಧ ಪ್ರಕರಣವೊಂದರಲ್ಲಿ ಎಡಿಜಿಪಿಯನ್ನು ಬಂಧಿಸಿದ್ದಲ್ಲದೆ, 3 ತಿಂಗಳಲ್ಲಿ ತೆಗೆದುಕೊಂಡಿರುವ ನಿರ್ದಾಕ್ಷಿಣ್ಯ ಕ್ರಮಗಳು ಸರ್ಕಾರದ ಜನಪರ, ಸ್ವಚ್ಛ ಆಡಳಿತದ ದೃಢಹೆಜ್ಜೆಗಳಾಗಿವೆ.
ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮುಲಾಜಿಲ್ಲದೆ 65ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದೆ. ಇದರಲ್ಲಿ ನಾಲ್ವರು ಡಿವೈಎಸ್ಪಿಗಳು, 18 ಅಧಿಕಾರಿಗಳು, 47 ಅಭ್ಯರ್ಥಿಗಳು ಕರ್ಮಕಾಂಡದ ಪಾಲುದಾರರು ಎಂದು ಗೊತ್ತಾಗುತ್ತಿದ್ದಂತೆ ಸರ್ಕಾರ ಸ್ವಜನಪಕ್ಷಪಾತ ಮಾಡದೆ ಕ್ರಮಕ್ಕೆ ಮುಂದಾಗಿದ್ದು ಭರವಸೆಯ ಹೊಸ ಚರಿತ್ರೆಯಾಗಿದೆ.
ಭ್ರಷ್ಟಾಚಾರ ಸಮಾಜವನ್ನು ಗೆದ್ದಲಿನಂತೆ ತಿನ್ನುತ್ತಿರುವುದು ಕಟುವಾಸ್ತವ. ಇದು ಉಲ್ಬಣಾವಸ್ಥೆ ತಲುಪಲು ಕಾರಣರಾರು ಎಂದು ಎದೆ ಮುಟ್ಟಿಕೊಂಡು ನೋಡಿಕೊಳ್ಳಬೇಕು. ಕೋತಿ ತಾನು ಮೊಸರು ತಿಂದು ಹೋತದ ಗಡ್ಡಕ್ಕೆ ಸವರಿದ್ದು ಗೊತ್ತಲ್ಲವೇ? ಇದಕ್ಕೆ ಕಾರಣರಾದವರು ಸತ್ಯ ಹರಿಶ್ಚಂದ್ರರಂತೆ ಮಾತಾಡುವುದನ್ನು ನಿಲ್ಲಿಸುವುದು ಒಳಿತು.
ಭ್ರಷ್ಟಾಚಾರದಲ್ಲಿ ಯಾರ ‘ಕೈ’ವಾಡವಿದೆ ಎನ್ನುವುದು ಎಲ್ಲರಿಗೂ ಗೊತ್ತು. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ! ವೇಷಧಾರಿಗಳೆಲ್ಲ ಕಳ್ಳಾಟವಾಡುತ್ತ ನಮ್ಮನ್ನು ಪ್ರಶ್ನಿಸುತ್ತಿರುವವರೇ ಕರ್ಮಕಾಂಡಗಳ ಮೂಲಪುರುಷರು. ಪಾಪಪ್ರಜ್ಞೆಯಿಂದ ಬಡಬಡಿಸುವುದನ್ನು ಬಿಟ್ಟು, ಮಾಡಿದ ಪಾಪವನ್ನು ಒಪ್ಪಿಕೊಳ್ಳುವುದು ಮರ್ಯಾದಸ್ಥರ ಲಕ್ಷಣ ಎಂದು ಬರೆದುಕೊಂಡಿದೆ.