ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು 17ನೇ ಬಾರಿ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಇಂದು ಸಂಜೆ ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಅವರು ಮಹತ್ವದ ಸಭೆ ನಡೆಸಲಿದ್ದಾರೆ.
ಮಾರ್ಚ್ 6ರಂದು ಬೆಳಿಗ್ಗೆ 9:45ಕ್ಕೆ ಮುಖ್ಯಮಂತ್ರಿ ನೇತೃತ್ವದಲ್ಲಿ ವಿಶೇಷ ಸಂಪುಟ ಸಭೆ ನಡೆಯಲಿದ್ದು, ಬಜೆಟ್ ಮಂಡನೆಗೆ ಸಚಿವ ಸಂಪುಟದ ಅನುಮೋದನೆ ಪಡೆಯಲಾಗುತ್ತದೆ. ಈ ಸಭೆಯಲ್ಲಿ ವಿವಿಧ ಇಲಾಖೆಗಳ ಹಂಚಿಕೆ, ಯೋಜನೆಗಳು ಹಾಗೂ ಹಣಕಾಸು ಸಮತೋಲನ ಕುರಿತ ಅಂತಿಮ ಚರ್ಚೆಗಳು ನಡೆಯಲಿವೆ.
ಕಳೆದ ಸಾಲಿನ ಬಜೆಟ್ ಗಾತ್ರ ಸುಮಾರು ₹4.9 ಲಕ್ಷ ಕೋಟಿಯಿತ್ತು. ಈ ಬಾರಿ ಅದು ಶೇ.10 ರಿಂದ 15ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅಂದರೆ, ಒಟ್ಟಾರೆ ಬಜೆಟ್ ಗಾತ್ರವು ₹5.4 ಲಕ್ಷ ಕೋಟಿಗೂ ಹೆಚ್ಚು ಆಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಾಮಾಜಿಕ ಭದ್ರತಾ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವ ನಿರೀಕ್ಷೆಯಿದೆ. ಜೊತೆಗೆ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚುವರಿ ಅನುದಾನ ಒದಗಿಸುವ ಪ್ರಶ್ನೆಯೂ ಬಜೆಟ್‌ನಲ್ಲಿ ಪ್ರಮುಖವಾಗಿರಬಹುದು.
ರಾಜ್ಯದ ಆರ್ಥಿಕ ಸ್ಥಿತಿ, ಆದಾಯ–ವೆಚ್ಚ ಸಮತೋಲನ ಮತ್ತು ಕೇಂದ್ರದ ಅನುದಾನಗಳನ್ನು ಪರಿಗಣಿಸಿ ಈ ಬಾರಿ ಬಜೆಟ್ ರೂಪುಗೊಳ್ಳಲಿದೆ. ಸಿದ್ದರಾಮಯ್ಯ ಅವರ 17ನೇ ಬಜೆಟ್ ಆದ್ದರಿಂದ ಇದು ರಾಜಕೀಯ ಹಾಗೂ ಆರ್ಥಿಕವಾಗಿ ಮಹತ್ವ ಪಡೆದಿದೆ.








