“ಪೊಲೀಸರಿಗೆ ಏನು ಹೇಳಬೇಕೋ ಹೇಳಿದ್ದೀನಿ, ಆಚೆ ಬಂದ್ರೆ ಸರಿ ಇರಲ್ಲ”
ಬೆಂಗಳೂರು : ಕಡೆಗೂ ಕೊರೊನಾ ಕಂಟ್ರೋಲ್ ಗೆ ಲಾಕ್ ಡೌನ್ ಮೊರೆ ಹೋಗಿದ್ದು, ರಾಜ್ಯದಾದ್ಯಂತ ಮೇ.10ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸಂಪೂರ್ಣ ಸ್ತಬ್ಧವಾಗಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವ ಸೌಲಭ್ಯಗಳೂ ಇರುವುದಿಲ್ಲ. ಹೋಟೆಲ್, ಪಬ್, ಬಾರ್, ಕೈಗಾರಿಕೆ ಎಲ್ಲವೂ ಸ್ಥಗಿತಗೊಳ್ಳಲಿದೆ.

ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆಗೆ ಅವಕಾಶವಿದೆ. ಆದ್ರೆ 10 ಗಂಟೆಯ ನಂತರ ಒಬ್ಬನೇ ಒಬ್ಬ ವ್ಯಕ್ತಿಯೂ ರಸ್ತೆಗೆ ಇಳಿಯುವಂತಿಲ್ಲ. ಆದರೆ ಅನಿವಾರ್ಯ ಕೆಲಸಕ್ಕೆ ಪಾಸ್ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಬಿಎಸ್ ವೈ ತಿಳಿಸಿದ್ದಾರೆ.
ಇನ್ನು ಲಾಕ್ ಡೌನ್ ಅವಧಿಯಲ್ಲಿ ಒಬ್ಬನೇ ವ್ಯಕ್ತಿ ರಸ್ತೆಯಲ್ಲಿ ಓಡಾಡೋಕೆ ಬಿಡಲ್ಲ ಎಂದು ಎಚ್ಚರಿಸಿದ ಸಿಎಂ, ಪೊಲೀಸರಿಗೆ ಏನು ಹೇಳಬೇಕೋ ಹೇಳಿದ್ದೀನಿ. ಜನರು ಸಹಕಾರ ನೀಡದಿದ್ದರೆ ಇನ್ನೂ ಏನೆಲ್ಲಾ ಮಾಡಬೇಕು, ಅದನ್ನು ಮಾಡೋಕೆ ನಾನು ಸಿದ್ಧನಿದ್ದೇನೆ.
ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾದ್ದು ಜನರ ಕರ್ತವ್ಯ. ಅದನ್ನು ಅರ್ಥ ಮಾಡಿಕೊಳ್ಳಿ ಎಂದು ಆಗ್ರಹ ಮಾಡಿದರು.









