KarnatakaCM | ಮುಖ್ಯಮಂತ್ರಿಗಳೇ…. ‘ರಾಮ’ ನಿಮ್ಮನ್ನು ಎಂದಿಗೂ ಕ್ಷಮಿಸಲಾರ
ಬೆಂಗಳೂರು : ಧಾರವಾಡ ನುಗ್ಗೀಕೇರಿ ಆಂಜನೇಯ ದೇವಸ್ಥಾನ ಆವರಣದಲ್ಲಿ ಮುಸ್ಲಿಂರಿಗೆ ಸೇರಿದ ನಾಲ್ಕು ಅಂಗಡಿಗಳನ್ನು ಶ್ರೀ ರಾಮಸೇನೆ ಕಾರ್ಯಕರ್ತರು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಘಟಕ ಟ್ವಿಟ್ಟರ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧದ ಕಿಡಿಕಾರಿದೆ.
ಮುಖ್ಯಮಂತ್ರಿಗಳೇ…. ಸೌಖ್ಯವೇ? ಆರೋಗ್ಯವಾಗಿದ್ದೀರಿ ಅಲ್ಲವೇ? ಕಣ್ಣು, ಕಿವಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆ ತಾನೇ? ಮೆದುಳು ಸುಸ್ಥಿತಿಯಲ್ಲಿದೆ ತಾನೇ? ಹೃದಯವಿದೆಯಲ್ಲವೇ?ಎಲ್ಲವೂ ಸರಿ ಇದ್ದು ಸುಮ್ಮನಿದ್ದೀರಿ ಎಂದರೆ ‘ರಾಮ’ ನಿಮ್ಮನ್ನು ಎಂದಿಗೂ ಕ್ಷಮಿಸಲಾರ ಎಂದು ಖಾರವಾಗಿ ಟ್ವೀಟ್ ಮಾಡಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಲಾರಪ್ಪ ಗುಡ್ಡಪ್ಪನವರ, ಮಹಾಲಿಂಗ ಐಗಳಿ, ಚಿದಾನಂದ ಕಲಾಲ ಹಾಗೂ ಕುಮಾರ ಕಟ್ಟಿಮನಿ ಬಂಧಿತರು. ನಬಿಸಾಬ್ ಮಾಲೀಕತ್ವದ ಕಲ್ಲಂಗಡಿ ಹಣ್ಣಿನಂಗಡಿ ಧ್ವಂಸ ಮಾಡಲಾಗಿತ್ತು.
ನಡೆದಿದ್ದೇನು : ಧಾರವಾಡ ಹೊರವಲಯದ ನುಗ್ಗಿಕೇರಿ ಆಂಜನೇಯ ಸ್ವಾಮಿ ದೇವಸ್ಥಾನ ಪ್ರಸಿದ್ಧಿ ಪಡೆದ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ ಪ್ರತಿ ಶನಿವಾರ ಸಾವಿರಾರು ಭಕ್ತು ಬಂದು ದೇವರ ದರ್ಶನ ಪಡೆಯುತ್ತಾರೆ. ಈ ದೇವಸ್ಥಾನದ ಆವರಣದಲ್ಲಿ 4 ಹಿಂದೂಯೇತರ ಅಂಗಡಿಗಳಿದ್ದು, ಕಳೆದ 15 ದಿನಗಳ ಹಿಂದೆ ಶ್ರೀರಾಮ ಸೇನೆಯ ಕಾರ್ಯಕರ್ತರು ದೇವಸ್ಥಾನದ ಬಳಿ ಬಂದು ಪ್ರತಿಭಟನೆ ಮಾಡಿದ್ದರು.
ಹಾಗೇ ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕೆಂದು ಮನವಿ ಮಾಡಿದ್ದರು. ಶನಿವಾರ ಹಿಂದೂಯೇತರ ಅಂಗಡಿಗಳು ಮುಚ್ಚದೇ ಇದ್ದಿದ್ದರಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಸ್ಥಳಕ್ಕೆ ಬಂದು ಅಂಗಡಿಗಳಲ್ಲಿದ್ದ ಕಲ್ಲಂಗಡಿ ಹಣ್ಣು ಹಾಗೂ ತೆಂಗಿನಕಾಯಿಗಳನ್ನು ಒಡೆದು ಹಾಕಿದ್ದರು.