ಬೆಂಗಳೂರು: ಬಳ್ಳಾರಿಯಲ್ಲಿ ಕೊರೊನಾದಿಂದ ಮೃತಪಟ್ಟವರ ಶವಗಳನ್ನು ಅವೈಜ್ಞಾನಿಕವಾಗಿ ದಫನ್ ಮಾಡಿ ಶಿಷ್ಟಾಚಾರ ಉಲ್ಲಂಘಿಸಿದ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಕರ್ನಾಟಕ ತಲೆತಗ್ಗಿಸುವಂತೆ ಮಾಡಿದೆ.
ಬಳ್ಳಾರಿಯಲ್ಲಿ ಸೋಮವಾರ ಒಂದೇ ದಿನ 9 ಮಂದಿ ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದರು. ಮೃತರ ಎಲ್ಲಾ ಶವಗಳನ್ನು ಒಂದೇ ಗುಂಡಿಯೊಳಗೆ ಕಸ ಎಸೆದಂತೆ ಎಸೆದು ಮಣ್ಣು ಮಾಡುವ ಮೂಲಕ ಮಾನವೀಯತೆಯನ್ನೇ ಅಣಕಿಸಿದ್ದ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ.
ಯಾವುದೇ ವ್ಯಕ್ತಿಯ ಶವವಾದರೂ ಸರಿ, ಕನಿಷ್ಠ ಅಂತಿಮ ಗೌರವ ನೀಡಿ ಶಿಷ್ಟಾಚಾರ ಪಾಲಿಸಲೇಬೇಕು ಎಂದು ಸುಪ್ರೀಂಕೋರ್ಟ್ ಕೂಡ ಇತ್ತೀಚೆಗೆ ಸೂಚಿಸಿತ್ತು. ಆದರೆ, ಕೊರೊನಾದಿಂದ ಮೃತಪಟ್ಟಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವೈಜ್ಞಾನಿಕವಾಗಿ ಮಣ್ಣು ಮುಚ್ಚಿದ ವಿಡಿಯೋ ಪ್ರಸಾರ ಮಾಡಿರುವ ಇಂಗ್ಲೆಂಡ್‍ನ ಪ್ರಮುಖ ನ್ಯೂಸ್ ಚಾನೆಲ್ ಬಿಸಿಸಿ, ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕ್ಷಮೆ ಕೇಳಿದ್ದಾರೆ ಎಂದು ವರದಿ ಮಾಡಿದೆ. ಈ ನಿರ್ಲಕ್ಷ್ಯದಿಂದಾಗಿ ಜಾಗತಿಕ ಮಟ್ಟದಲ್ಲಿ ಕರ್ನಾಟಕ ತಲೆತಗ್ಗಿಸುವಂತೆ ಮಾಡಿದೆ.
ನಿನ್ನೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಗಳ ಕ್ಷಮೆ ಕೇಳಿದ್ದರು. ಜತೆಗೆ ಶವಗಳ ವಿಲೇವಾರಿ ಜವಾಬ್ದಾರಿ ಹೊತ್ತ ತಂಡವನ್ನು ಸೇವೆಯಿಂದ ವಜಾ ಮಾಡಿದ್ದರು. ಘಟನೆ ಕುರಿತಂತೆ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೂ ಆದೇಶ ನೀಡಿದ್ದಾರೆ.