ಶಿವಮೊಗ್ಗ : ಪಶ್ಚಿಮ ಘಟ್ಟ ಹಾಗೂ ಮಲೆನಾಡು ಭಾಗಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತುಂಗಾ ತಟದಲ್ಲಿ ನೆರೆ ಆತಂಕ ಎದುರಾಗಿದೆ. ಬೆಟ್ಟ ಗುಡ್ಡಗಳಿಂದ ಹಳ್ಳಕೊಳ್ಳಗಳಿಗೆ ಬಂದು ಸೇರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಒಳಹರಿವು ಕಡಿಮೆ ಮಾಡಿ ಹೊರ ಹರಿವು ಹೆಚ್ಚು ಮಾಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ ಕೆಬಿ ಶಿವಕುಮಾರ್ ಅವರು ನಿನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದು ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಡ್ಯಾಂ ಅಧಿಕಾರಿಗಳು ನಿನ್ನೆ ಸಂಜೆಯಷ್ಟೇ ಅರವತ್ತು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹೊರ ಬಿಟ್ಟಿದ್ದರು. ಇದೀಗ ಮತ್ತೆ ಜಿಲ್ಲಾಧಿಕಾರಿಗಳ ಆದೇಶದಂತೆ ತುಂಗಾ ನದಿಯಲ್ಲಿ ಹೊರ ಹರಿವು ಹೆಚ್ಚಳ ಮಾಡಲಾಗಿದೆ. ಸದ್ಯದ ಮಾಹಿತಿ ಅನುಸಾರವಾಗಿ ಗಾಜನೂರು ತುಂಗಾ ಡ್ಯಾಂನಿಂದ ಎಪ್ಪತ್ತು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರಬರುತ್ತಿದೆ. ಎಂಬತ್ತು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರ ಬಂದಿದ್ದೇ ಆದರೆ ಶಿವಮೊಗ್ಗದ ತುಂಗೆಯ ಮಡಿಲಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.








