ಬಿಡದಿ ಟೌನ್ಶಿಪ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ ಈ ಸಂಬಂಧ ಆದೇಶ ಹೊರಡಿಸಿದೆ.
ಅರ್ಜಿದಾರ ಕೆ.ಬಿ. ರಾಜೇಶ್ ಪರ ವಾದ ಮಂಡಿಸಿದ ವಕೀಲರು, ಭೂಸ್ವಾಧೀನಕ್ಕೂ ಮುನ್ನ ಸಾಮಾಜಿಕ ಪರಿಣಾಮ ಅಧ್ಯಯನ ನಡೆಸಿಲ್ಲ, ಪುನರ್ವಸತಿ ಕ್ರಮ ಕೈಗೊಂಡಿಲ್ಲ ಹಾಗೂ ಯೋಜನೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ರೈತರು ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಯಾವ ಕಾಯ್ದೆಯ ಯಾವ ನಿಬಂಧನೆಯನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಎಂದು ಪ್ರಶ್ನಿಸಿತು.
ಅರ್ಜಿದಾರರ ಪರ ವಕೀಲರು, ಹೊಸ ಭೂಸ್ವಾಧೀನ ಕಾಯ್ದೆಯಡಿ ಸ್ವಾಧೀನ ಪ್ರಕ್ರಿಯೆ ಅನುಸರಿಸಿಲ್ಲ ಎಂದು ವಾದಿಸಿದರು. ಆದರೆ, ಸರ್ಕಾರದ ಪರವಾಗಿ ಸ್ವಾಧೀನ ಪ್ರಕ್ರಿಯೆ ಸಂಬಂಧಿತ ಕಾಯ್ದೆಯಡಿ ನಡೆದಿದ್ದು, ಪರಿಹಾರಕ್ಕೆ ಹೊಸ ಕಾಯ್ದೆಯ ವಿಧಿಗಳನ್ನು ಅನ್ವಯಿಸಲಾಗಿದೆ ಎಂದು ತಿಳಿಸಲಾಯಿತು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಾದವನ್ನು ತಿರಸ್ಕರಿಸಿ ಪಿಐಎಲ್ ಅನ್ನು ವಜಾಗೊಳಿಸಿತು. ಜೊತೆಗೆ, ಯೋಜನೆಗೆ ಸಂಬಂಧಿಸಿದ ಇತರ ವಿಷಯಗಳನ್ನು ಮೆರಿಟ್ ಆಧಾರದ ಮೇಲೆ ಸೂಕ್ತ ಸಂದರ್ಭದಲ್ಲಿ ಪರಿಗಣಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.







