ನವದೆಹಲಿ: ಕೊರೊನಾ ಲಾಕ್ ಡೌನ್ ಹಿನ್ನೆಲೆ ದೇಶದಾದ್ಯಂತ ಬಾರ್, ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಆದ್ರೆ ಕರ್ನಾಟಕದ ಮತ್ತು ತೆಲಂಗಾಣದ ತಲಾ ಒಬ್ಬ ಕಾಂಗ್ರೆಸ್ ಕಾರ್ಯಕರ್ತರನ್ನು ಮದ್ಯದ ಬಾಟಲ್‌ಗಳ ಸಮೇತ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತ ಮನೀಶ್ ಬಸವರಾಜ್ ಮತ್ತು ತೆಲಂಗಾಣದ ರಾಮಗಾಡು ಶ್ರವಣ್ ರಾವ್ ಅವರನ್ನು 12 ಬಾಟಲ್ ಮದ್ಯದ ಜತೆ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ದೆಹಲಿ ಅಬಕಾರಿ ಕಾಯ್ದೆಯ ಸೆಕ್ಷನ್6 33 ಮತ್ತು 58ರ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ.
ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ
ಇನ್ನು ಘಟನೆ ಬಿಜೆಪಿ- ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ನಾಂದಿಯಾಗಿದೆ. ಕಾಂಗ್ರೆಸ್‌ನ ಯುವ ಘಟಕದ ಕಾರ್ಯಕರ್ತರು ಮದ್ಯ ಅಕ್ರಮ ಸಾಗಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇಂತಹ ಕೃತ್ಯವು ಕಾಂಗ್ರೆಸ್‌ನ ನಿಜ ಬಣ್ಣ ಬಯಲು ಮಾಡಿದೆ ಎಂದು ಅದು ಟೀಕಿಸಿದೆ.
ಆದ್ರೆ ಬಿಜೆಪಿ ಆರೋಪವನ್ನು ತಳ್ಳಿ ಹಾಕಿರುವ ಕಾಂಗ್ರೆಸ್, ಮದ್ಯ ಸಾಗಾಟದ ಆರೋಪದಲ್ಲಿ ನಮ್ಮ ಕಾರ್ಯಕರ್ತರನ್ನು ಬಂಧಿಸಿರುವುದರ ಹಿಂದೆ ಪಿತೂರಿ ಅಡಗಿದೆ. ಲಾಕ್‌ಡೌನ್ ವೇಳೆ ಬಡವರಿಗಾಗಿ ನಾವು ಮಾಡುತ್ತಿರುವ ಪರಿಹಾರ ಕಾರ್ಯಗಳಿಗೆ ಮಸಿ ಬಳಿಯುವ ಸಂಚು ಇದರ ಹಿಂದಿದೆ ಎಂದು ಭಾರತೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಹೇಳಿದ್ದಾರೆ.
‘ಇದು ಕಾಂಗ್ರೆಸ್ ಸಸಂಸ್ಕೃತಿ’ : ಬಿಜೆಪಿ ವಕ್ತಾರ
‘ನಮ್ಮ ಪಕ್ಷದ ಕಾರ್ಯಕರ್ತರು ಲಾಕ್‌ಡೌನ್ ವೇಳೆ ಅವಶ್ಯಕತೆ ಇರುವವರಿಗೆ ಆಹಾರ ಮತ್ತು ಅಗತ್ಯವಸ್ತು ಪೂರೈಸುವುದರಿಲ್ಲಿ ವ್ಯಸ್ತರಾಗಿದ್ದರೆ, ಕಾಂಗ್ರೆಸ್ ಕಾರ್ಯಕರ್ತರು ದುಬಾರಿ ಮದ್ಯ ಅಕ್ರಮ ಸಾಗಾಟ ಮಾಡುತ್ತಿದ್ದಾರೆ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟ್ವೀಟ್ ಮಾಡಿ ‘ಇದು ಕಾಂಗ್ರೆಸ್ ಸಸಂಸ್ಕೃತಿ ಎಂದು ವ್ಯಂಗ್ಯವಾಗಿದ್ದಾರೆ.
ಇದಕ್ಕೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಶ್ರೀನಿವಾಸ್ ಬಿ.ವಿ, ‘ಲಕ್ಷಾಂತರ ಮಂದಿಗೆ ಔಷಧ ಮತ್ತು ಆಹಾರ ಪೂರೈಸಿದ್ದೇ ನಾವು ಮಾಡಿರುವ ಅಪರಾಧ. ಬಿಜೆಪಿಯ ಆರೋಪಗಳು ನಮ್ಮ ಸಂಘಟನೆಯನ್ನು ಬೆದರಿಸಲಾರವು ಮತ್ತು ಕೆಲಸ ಮಾಡುವುದನ್ನು ನಿಲ್ಲಿಸಲಾರವು’ ಎಂದು ಉಲ್ಲೇಖಿಸಿದ್ದಾರೆ.








