ನವದೆಹಲಿ: ಏಪ್ರಿಲ್ 07ರ ವರೆಗೆ ಕರ್ನಾಟಕ-ಕೇರಳ ಗಡಿ ಬಂದ್ ತೆರವು ಸಾಧ್ಯವಿಲ್ಲ ಎಂದು ಸುಪ್ರೀಂಕೋಟ್ ಹೇಳಿದೆ. ಅಲ್ಲದೆ ಗಡಿ ಬಂದ್ ವಿವಾದವನ್ನು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಜೊತೆಗೆ ಎರಡು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಎರಡು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.
ಕೊರೊನಾ ಲಾಕ್ ಡೌನ್ ಹಿನ್ನೆಲೆ ಮುಚ್ಚಲ್ಪಟ್ಟಿರುವ ಕೇರಳ -ಕರ್ನಾಟಕ ಗಡಿಯನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು. ಎರಡು ಬದಿಯ ವಾದ ಆಲಿಸಿದ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ಕೇರಳ ರಾಜ್ಯ ಸರ್ಕಾರಗಳಿಗೆ ಮತ್ತಷ್ಟು ಮಾಹಿತಿ ಕೋರಿ ನೋಟಿಸ್ ನೀಡಿ ಏಪ್ರಿಲ್ ಏಳಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತು. ಈ ವೇಳೆ ಏಪ್ರಿಲ್ 7ರವರೆಗೂ ಗಡಿ ತೆರವು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.
ಅಲ್ಲದೆ ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಗಳಿದ್ದರೇ ಎರಡು ಸರ್ಕಾರದ ಕಾರ್ಯದರ್ಶಿಗಳ ಮಾತುಕತೆ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜೊತೆಗೆ ಮಾತುಕತೆ ಮೂಲಕವೂ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿದೆ.







