ಕರ್ನಾಟಕದಾದ್ಯಂತ ಮೈ ಕೊರೆವ ಚಳಿಯಿಂದಾಗಿ ಜನರು ತತ್ತರಿಸುತ್ತಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಶೀತ ವಾತಾವರಣವಿದೆ, ಇನ್ನೂ 1 ತಿಂಗಳು ಎಚ್ಚರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಮಧ್ಯಾಹ್ನದ ಹೊತ್ತಿನಲ್ಲೂ ಚಳಿಗೆ ಮೈ ನಡುಗುವ ಪರಿಸ್ಥಿತಿ ಎದುರಾಗಿದೆ. ಬೆಳಗಿನ ಜಾವ, ಸಂಜೆ ಹೊತ್ತು ಶೀತಗಾಳಿ ಬೀಸುತ್ತಿದ್ದು ಹೊರಗಡೆ ಹೋಗುವುದು ಅಸಾಧ್ಯ ಎನ್ನುವಂತಾಗಿದೆ.ಫೆಬ್ರವರಿವರೆಗೆ ಚಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಬೀದರ್, ವಿಜಯಪುರ, ಗದಗ, ರಾಯಚೂರು, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ ಹಾಗೂ ಶಿವಮೊಗ್ಗದಲ್ಲಿ ಮಂಗಳವಾರ ಕನಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 2-3 ಡಿಗ್ರಿ ಸೆ.ಗಿಂತ ಕಡಿಮೆ ಇತ್ತು.ಕರಾವಳಿ ಜಿಲ್ಲೆಗಳಲ್ಲಿ ಚಳಿಯು ಎಂದಿನಂತೆ ಇರಲಿದ್ದು, ತಾಪಮಾನ ಸ್ಥಿರವಾಗಿ ಇರಲಿದೆ.








