ಜವಾಬ್ದಾರಿಯುತ ವಿರೋಧ ಪಕ್ಷವಾಗಿರಲು ಕಾಂಗ್ರೆಸ್ ಪಕ್ಷ ವಿಫಲ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು : ಜವಾಬ್ದಾರಿಯುತ ವಿರೋಧಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಸದನದಲ್ಲಿ ರಾಷ್ಟ್ರಧ್ವಜ ಪ್ರದರ್ಶನದ ಮೂಲಕ ರಾಷ್ಟ್ರಧ್ವಜ ಸಂಹಿತೆಯನ್ನು ಉಲ್ಲಂಘನೆ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಷ್ಟ್ರಧ್ವಜ ಸಂಹಿತೆ :
ರಾಷ್ಟ್ರಧ್ವಜವನ್ನು ಹೇಗೆ ಬಳಕೆ ಮಾಡಬೇಕು ಎನ್ನುವ ಬಗ್ಗೆ ಸಂಹಿತೆಯಿದೆ. ರಾಷ್ಟ್ರಧ್ವಜದ ವಿಷಯ ಎಲ್ಲಿಯೂ ದುರುಪಯೋಗ ಆಗಬಾರದು ಎನ್ನುವುದು ಸಂಹಿತೆಯಲ್ಲಿದೆ. ಆದರೆ ವಿರೋಧಪಕ್ಷದವರು ರಾಜಕೀಯ ಪ್ರೇರಿತವಾಗಿ ಸದನದಲ್ಲಿ ಈ ವಿಷಯವನ್ನು ದುರುಪಯೋಗ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಜನರು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಈಶ್ವರಪ್ಪನವರ ಹೇಳಿಕೆಯಾಗಲಿ ಅಥವಾ ಇನ್ನಾವುದೇ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಹಾಗೂ ಉತ್ತರ ನೀಡಲು ತಯಾರಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ವಿರೋಧಪಕ್ಷವಾಗಿ ಕಾಂಗ್ರೆಸ್‍ನವರು ಸದನದಲ್ಲಿ ನಡೆದುಕೊಂಡ ರೀತಿ, 100 ವರ್ಷಗಳ ಇತಿಹಾಸವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವಂಥದ್ದಲ್ಲ. ತಮ್ಮ ನಿಲುವು ಹಾಗೂ ವರ್ತನೆಗಳಿಂದ ಇಡೀ ದೇಶದಲ್ಲಿ ನೆಲಕಚ್ಚುತ್ತಿದ್ದು, ಜನರಿಂದ ದೂರವಾಗುತ್ತಿದೆ ಎಂದು ತಿಳಿಸಿದರು.
ಗೌರವಾನ್ವಿತ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವ ಜೊತೆಗೆ ಜನರ ಸಮಸ್ಯೆಗಳ ಬಗ್ಗೆ ವಿರೋಧ ಪಕ್ಷದವರು ಚರ್ಚಿಸಬಹುದಿತ್ತು. ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ. ಕೇಸರಿ ಧ್ವಜವನ್ನು 300-400 ವರ್ಷಗಳ ನಂತರ ಹಾರಿಸಲು ಸಾಧ್ಯವಾಗಬಹುದು ಎಂದು ಹೇಳುವ ಜೊತೆಗೆ ರಾಷ್ಟ್ರಧ್ವಜವನ್ನು ಒಪ್ಪಿಕೊಂಡಿದ್ದು, ಎಲ್ಲರೂ ಗೌರವ ನೀಡಬೇಕು ಎಂದು ತಿಳಿಸಿದ್ದಾರೆ. ಅವರ ಹೇಳಿಕೆಯ ಆಯ್ದ ಭಾಗಗಳನ್ನು ಮಾತ್ರ ಉಲ್ಲೇಖಿಸಿ ಜನರ ಹಾಗೂ ಸದನದ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಸಚಿವರ ಹೇಳಿಕೆಯಲ್ಲಿ ಕಾನೂನಾತ್ಮಕವಾಗಿ ಯಾವುದೇ ಉಲ್ಲಂಘನೆಯಾಗಿಲ್ಲ. ಇಲ್ಲ ಸಲ್ಲದ ವಿಚಾರಗಳನ್ನು ಎತ್ತಿ ಮಾತನಾಡುತ್ತಿರುವುದು ವಿರೋಧಪಕ್ಷದವರ ರಾಜಕೀಯ ದಿವಾಳಿತನವನ್ನು ಪ್ರದರ್ಶಿಸುತ್ತದೆ ಎಂದು ತಿಳಿಸಿದರು.